ತಾಳಿಕೋಟೆ: ಗ್ರಾಮಗಳ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳೊಂದಿಗೆ ಪಕ್ಷ ಬೇಧ ಮರೆತು ಗ್ರಾಮಸ್ಥರು ಸಹಕರಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಕೋರಿದರು.
ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ 2017-18ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂಗಳಗೇರಿ ಗ್ರಾಮದ ರಸ್ತೆ, ಚರಂಡಿ ಒಳಗೊಂಡಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬದ್ಧನಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾರ್ಯವನ್ನು ಕೈಗೊಳ್ಳಲಾಗುವದೆಂದ ಅವರು, ಸಾಂಸ್ಕೃತಿಕ ಭವನ ನಿರ್ಮಾಣವನ್ನು ನಿರ್ಮಿತಿ ಕೇಂದ್ರವು ವಹಿಸಿಕೊಂಡಿದೆ. ಉತ್ತಮ ಗುಣಮಟ್ಟದ ಕಾಮಗಾರಿಯೊಂದಿಗೆ ಭವನ ನಿರ್ಮಾಣಗೊಳ್ಳಲಿದೆ ಎಂದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು ಸಲ್ಲದು. ಇಂಗಳಗೇರಿ ಗ್ರಾಮದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಗುರುಪಾದಪ್ಪ ಸಜ್ಜನ ಅವರ ಕಾರ್ಯ ಮೆಚ್ಚುವಂತಹದ್ದಾಗಿದೆ. ಸೈನಿಕರ ಮೇಲೆ ಉಗ್ರರ ದಾಳಿ ಪ್ರತಿಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಉರಿ ದಾಳಿ ನಂತರ ನಮ್ಮ ವಾಯು ಸೇನೆ ಸೈನಿಕರು ನಿರ್ದಿಷ್ಟ ದಾಳಿ ಮೂಲಕ 350ಕ್ಕೂ ಹೆಚ್ಚು ಉಗ್ರರನ್ನು ಪಾಕ್ ಗಡಿಯೊಳಗೆ ನುಗ್ಗಿ ಸಂಹಾರ ಮಾಡಿದ್ದಾರೆ. ನಮ್ಮ ದೇಶದ ಸೈನಿಕರಿಗೆ ಎಲ್ಲ ರೀಯಿಂದಲೂ ಭದ್ರತೆ ಒದಗಿಸಿದ್ದಾರೆಂದ ಅವರು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ದೇಶದ ಭದ್ರತೆಗಾಗಿ ಮತ್ತೂಮ್ಮೆ ಮೋದಿ ಪ್ರಧಾನಿಯಾಗುವುದು ಅವಶ್ಯವಾಗಿದೆ ಎಂದರು.
ಈ ವೇಳೆ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಜಾಗೆ ದಾನ ನೀಡಿದ ಗುರುಪಾದಪ್ಪ ಸಜ್ಜನ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಖಂಡರಾದ ಮಲಕೇಂದ್ರಾಯಗೌಡ ಪಾಟೀಲ, ಹೇಮರಡ್ಡಿ ಮೇಟಿ, ಗ್ರಾಪಂ ಅಧ್ಯಕ್ಷ ರಾಜು ಕರಡ್ಡಿ, ಬಸನಗೌಡ ಬಿರಾದಾರ, ಗುರಲಿಂಗಯ್ಯ ಮುತ್ಯಾ, ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತರ ಡಾ| ತಿವಾರಿ ಇದ್ದರು.
ದೇಶದ ಭದ್ರತೆ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿಜಿ ಮತ್ತೂಮ್ಮೆ ಪ್ರಧಾನಿಯಾಗುವುದು ಅವಶ್ಯ. ಈ ನಿಟ್ಟಿನಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಯುವಕರು, ಹಿರಿಯರು ಎಲ್ಲರೂ ಬೆಂಬಲಿಸಿ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸೋಣ.
ಎ.ಎಸ್. ಪಾಟೀಲ (ನಡಹಳ್ಳಿ)