Advertisement

ಪಾರ್ಕಿಂಗ್‌ ಸಮಸ್ಯೆಗೆ ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ ಜನತೆ

01:23 AM Mar 10, 2020 | Sriram |

ನಗರದಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತಿರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವುದು ಹೊಸ ಮೇಯರ್‌ ಮುಂದಿರುವ ಬೃಹತ್‌ ಸವಾಲುಗಳಲ್ಲಿ ಒಂದು. ನಗರದಲ್ಲಿ ಕೆಲವೆಡೆ ಮಾತ್ರ ಅಧಿಕೃತ ಪಾರ್ಕಿಂಗ್‌ ವ್ಯವಸ್ಥೆ ಇದ್ದು, ಇತರೆಡೆಗಳಲ್ಲಿ ವಾಹನ ಚಾಲಕರು ಪರದಾಡುವ ಸ್ಥಿತಿಯಿದೆ. ಇದನ್ನು ವ್ಯವಸ್ಥಿತವಾಗಿ ನಿಭಾಯಿಸಿದರೆ ಸಂಚಾರ ದಟ್ಟಣೆ ತಪ್ಪಿಸುವುದು ಸುಲಭ.

Advertisement

ಮಹಾನಗರ: ಪಾಲಿಕೆಯ ನೂತನ ಆಡಳಿತಕ್ಕೆ ಸವಾಲಾಗಿ ಪರಿಣಮಿಸುವ ಮತ್ತೂಂದು ಸಂಗತಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಒದಗಿಸುವುದು ಮತ್ತು ಅದಕ್ಕೆ ಪೂರಕವಾಗಿರುವ ಸಂಚಾರ ದಟ್ಟಣೆ ನಿಯಂತ್ರಣ.

ನಗರ ಬೆಳೆಯುತ್ತಿದ್ದಂತೆ ಇಲ್ಲಿನ ಜನವಾಸಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಕ್ಷಿಪ್ರಗತಿಯಲ್ಲಿ ಏರುತ್ತಿದೆ. ಅದಕ್ಕೆ ಪೂರಕವಾಗಿ ನಗರ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದು ದೊಡ್ಡ ಸವಾಲಾಗಿದೆ. ಬೆಂಗಳೂರಿನಂಥ ನಗರಗಳಿಗೆ ಹೋಲಿಸಿದರೆ, ಮಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಅಷ್ಟೊಂದು ಇಲ್ಲ. ಆದರೆ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಕಲ್ಪಿಸುವುದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಲಾಲ್‌ಬಾಗ್‌ ಬಳಿ, ಎಬಿ ಶೆಟ್ಟಿ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ, ಬಲ್ಮಠ ರಸ್ತೆ ಸಹಿತ ಬೆರಳೆಣಿಕೆ ರಸ್ತೆಗಳನ್ನು ಹೊರತುಪಡಿಸಿದರೆ ಬೇರೆಲ್ಲಿಯೂ ಅಧಿಕೃತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಈ ಕಾರಣಕ್ಕೆ ನಾಗರಿಕರಿಗೆ ನಿತ್ಯವೂ ತಮ್ಮ ವಾಹನಗಳನ್ನು ನಿಲ್ಲಿಸಲು ಸ್ಥಳ ಹುಡುಕುವುದೇ ದೊಡ್ಡ ಕಿರಿಕಿರಿಯಾಗಿದೆ. ಈ ಬಗ್ಗೆ ಹಿಂದೆ ಹಲವಾರು ಬಾರಿ ಸಂಚಾರ ಪೊಲೀಸರ, ಪಾಲಿಕೆ ಆಡಳಿತ ವರ್ಗದ ಗಮನಕ್ಕೆ ತಂದಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಬಾರಿಯಾದರೂ ಹೊಸ ಮೇಯರ್‌ ಈ ಸಮಸ್ಯೆಗೆ ಪರಿಹಾರ ಕಾದು ನೋಡಬೇಕಿದೆ. ಇದರೊಂದಿಗೆ ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮೂಲಸೌಕರ್ಯವನ್ನೂ ಒದಗಿಸಬೇಕಿದೆ. ವಾಹನ ಸಂಚಾರದಲ್ಲಿ ಮಂಗಳೂರು ಮಹಾನಗರಕ್ಕೆ ರಾಜ್ಯದಲ್ಲಿ 2ನೇ ಸ್ಥಾನವಿದೆ. ಆದರೆ ಇಷ್ಟೊಂದು ಅಗಾಧ ಪ್ರಮಾಣದ ವಾಹನಗಳ ಸಂಚಾರಕ್ಕೆ ಯೋಗ್ಯವಾದ ರಸ್ತೆ, ಪಾರ್ಕಿಂಗ್‌ ಸೌಲಭ್ಯ, ಜಂಕ್ಷನ್‌ಗಳ ಅಭಿವೃದ್ಧಿ , ಜನರ ಓಡಾಟಕ್ಕೆ ಬೇಕಾಗಿರುವ ಫುಟ್‌ಪಾತ್‌ ನಿರ್ಮಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಆದರೆ ಇಲ್ಲಿ ಪೊಲೀಸ್‌, ಕಂದಾಯ ಮತ್ತಿತರ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವುದೇ ಪ್ರಮುಖ ಸವಾಲು.
ಸಂಚಾರ ಪೊಲೀಸ್‌ ವಿಭಾಗದ ಅಧಿಕಾರಿಗಳು ವಿವಿಧ ವೇದಿಕೆಗಳಲ್ಲಿ ಈ ಹಿಂದೆ ಹಲವು ಬಾರಿ ಮಾಡಿರುವ ಆರೋಪಗಳ ಆಧಾರದಲ್ಲಿ ಹೇಳುವುದಾದರೆ, ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಪೊಲೀಸರು ಪಾಲಿಕೆಗೆ ಬರೆದಿರುವ ಪತ್ರಗಳಲ್ಲಿ ಹೆಚ್ಚಿನ ಪತ್ರಗಳಿಗೆ ತತ್‌ಕ್ಷಣದ ಸ್ಪಂದನೆ ಲಭಿಸುತ್ತಿಲ್ಲ. ಕೆಲವೊಮ್ಮೆ ತಿಂಗಳುಗಟ್ಟಲೆ ಪಾಲಿಕೆಯ ಕಡತದಲ್ಲಿಯೇ ಬಾಕಿ ಉಳಿದಿರುತ್ತವೆ. ಇನ್ನೂ ಕೆಲವು ಪತ್ರಗಳಿಗೆ ಸಂಬಂಧಿಸಿ ಪುನರಪಿ ನೆನಪೋಲೆ ಕಳುಹಿಸಿದರೂ ಸಂ³ದನೆ ಇಲ್ಲ.

ಟೇಕಾಪ್‌ ಆಗದ ಯೋಜನೆ
ಬಹಳಷ್ಟು ಬಹು ಮಹಡಿ ಕಟ್ಟಡಗಳು ತಳ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್‌ಗೆ ಜಾಗವನ್ನು ಕಟ್ಟಡ ಯೋಜನೆಯ ನಕ್ಷೆಯಲ್ಲಿ ತೋರಿಸಿದ್ದರೂ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆದ ಬಳಿಕ ಆ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತುತ್ತವೆ. ಇದರಿಂದ ವಾಹನಗಳಿಗೆ ರಸ್ತೆ ಬದಿಯೇ ಗತಿ. ನೋಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರ ಸಮಸ್ಯೆ ತಲೆ ದೋರುತ್ತದೆ. ಸಂಚಾರ ಪೊಲೀಸರು ಟೋಯಿಂಗ್‌ ವಾಹನ ಕರೆಸಿ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನವನ್ನು ತೆರವು ಮಾಡಲು ಹೋದಾಗ ಪೊಲೀಸರು, ಸಾರ್ವಜನಿಕರ ಮಧ್ಯೆ ಸಂಘರ್ಷ ಉಂಟಾಗುತ್ತದೆ.

Advertisement

ಈ ಹಿನ್ನೆಲೆಯಲ್ಲಿ ಪೊಲೀಸರು ನಿಯಮ ಉಲ್ಲಂ ಸಿದ ಕಟ್ಟಡಗಳನ್ನು ಗುರುತಿಸಿ, ಪಾರ್ಕಿಂಗ್‌ ಜಾಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡಿಸುವ ಬಗ್ಗೆ ಪಾಲಿಕೆಗೆ ನೋಟಿಸ್‌ ಕಳಿಸಿದ್ದರು. ಆದರೆ ಅದಕ್ಕೆ ಕ್ರಮ ಕೈಗೊಳ್ಳಲು ಪಾಲಿಕೆಗೆ ಸಾಕಷ್ಟು ಸಮಯವಾಗಿತ್ತು. ಆದರೂ ಪೂರ್ತಿ ತೆರವು ಆಗಿಲ್ಲ.

ಈಗ ಚರಂಡಿ ನಿರ್ಮಾಣ ಕಾಮಗಾರಿಯನ್ನು ಬಹಳಷ್ಟು ಕಡೆ ಕೈಗೆತ್ತಿಕೊಂಡಿದ್ದರೂ ಕೆಲವು ಕಡೆ ಅರ್ಧದಲ್ಲಿ ನಿಲ್ಲಿಸಲಾಗಿದೆ.

ನೀರಿನ ಕೊಳವೆ, ಒಳಚರಂಡಿ ಪೈಪ್‌ಲೈನ್‌ ಸೋರಿಕೆ ಆಗುತ್ತಿದ್ದ ಕಾರಣ ಕೆಲವು ಮುಖ್ಯ ರಸ್ತೆಗಳಲ್ಲಿ ಕಾಂಕ್ರೀಟ್‌ ಮೇಲ್ಮೈ ಅಗೆದು ಬಳಿಕ ಮಣ್ಣು ಹಾಕಿ ತುಂಬಿಸಲಾಗಿದೆ. ಅದಕ್ಕೆ ಪುನಃ ಕಾಂಕ್ರೀಟ್‌ ಹಾಕಿ ಮುಚ್ಚುವ ಕೆಲಸ ಇನ್ನೂ ಆಗಿಲ್ಲ.ಕೆಲವು ಜಂಕ್ಷನ್‌ಗಳ ಅಭಿವೃದ್ಧಿ ಆಗಿದ್ದರೂ ಪಿವಿಎಸ್‌ ಜಂಕ್ಷನ್‌ಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ಇನ್ನು ಮಳೆಗಾಲ ಪ್ರಾರಂಭವಾಗಲು ಕೆಲವೇ ಸಮಯ ಉಳಿದಿದೆ. ಹಾಗಾಗಿ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ ಈ ಎಲ್ಲ ಸಮಸ್ಯೆಗಳನ್ನು ಹೊಸ ಮೇಯರ್‌ ಅವರು ಸವಾಲಾಗಿ ಸ್ವೀಕರಿಸಿ ಅತಿ ಶೀಘ್ರದಲ್ಲಿ ಬಗೆಹರಿಸುವತ್ತ ಆದ್ಯ ಗಮನಹರಿಸಬೇಕೆನ್ನುವುದು ನಗರ ಜನರ ನಿರೀಕ್ಷೆ.

18,733 ವಾಣಿಜ್ಯ ವಾಹನಗಳು
2020 ಜನವರಿ 1ರಿಂದ ಫೆ. 25ರ ವರೆಗಿನ ಅವಧಿಯಲ್ಲಿ ಮಂಗಳೂರು ಸಾರಿಗೆ ಕಚೇರಿಯಲ್ಲಿ 907 ಬಸ್‌ಗಳು, 7,001 ಸರಕು ವಾಹನಗಳು, 7,002 ತ್ರಿಚಕ್ರ (ರಿಕ್ಷಾ) ಪ್ರಯಾಣಿಕ ವಾಹನಗಳು, 648 ತ್ರಿಚಕ್ರ ಸರಕು ವಾಹನಗಳು, 392 ಮ್ಯಾಕ್ಸಿ ಕ್ಯಾಬ್‌, 102 ಆ್ಯಂಬುಲೆನ್ಸ್‌, 162 ಶಾಲಾ- ಕಾಲೇಜು ವಾಹನಗಳು, 2,074 ಮೋಟಾರ್‌ ಕ್ಯಾಬ್‌, 13 ಅಗ್ನಿಶಾಮಕ ವಾಹನಗಳು, 37 ಟ್ರ್ಯಾಕ್ಟರ್‌, 11 ಟ್ರೈಲರ್‌, 74 ಬಾಡಿಗೆ ದ್ವಿಚಕ್ರ ವಾಹನ ಸಹಿತ 18,733 ವಾಣಿಜ್ಯ ವಾಹನಗಳು ವರದಿ ಮಾಡಿದ್ದವು. ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನಗಳ ಅಂಕಿ ಅಂಶ ಲಭ್ಯವಾಗಿಲ್ಲ.

5.42 ಲಕ್ಷ ವಾಹನಗಳು
ಮಂಗಳೂರು ಮತ್ತು ಸುರತ್ಕಲ್‌ ಸಾರಿಗೆ ಕಚೇರಿಗಳಲ್ಲಿ ನೋಂದಣಿಗೊಂಡ ವಾಹನಗಳ ಸಂಖ್ಯೆ ಈಗ 5,42,000 ಇದೆ. ಈ ವಾಹನಗಳ ಹೊರತಾಗಿ ಪಕ್ಕದ ಬಂಟ್ವಾಳ ಸಾರಿಗೆ ಕಚೇರಿ ಮತ್ತು ನೆರೆಯ ಕೇರಳ ರಾಜ್ಯದ ಕಾಸರಗೋಡಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಮಂಗಳೂರು ನಗರಕ್ಕೆ ವಾಹನಗಳು ದಿನನಿತ್ಯ ಬಂದು ಹೋಗುತ್ತಿರುತ್ತವೆ. ಮೂರು ರಾಷ್ಟ್ರೀಯ ಹೆದ್ದಾರಿಗಳು ಕೂಡ ಪಾಲಿಕೆ ವ್ಯಾಪ್ತಿಯಲ್ಲಿ ಇರುವುದರಿಂದ ಈ ಹೆದ್ದಾರಿಗಳಲ್ಲಿಯೂ ಸಾಕಷ್ಟು ವಾಹನಗಳು ಓಡಾಡುತ್ತಿರುತ್ತವೆ.

ಪಾರ್ಕಿಂಗ್‌ಗೆ ಜಾಗ ಇಲ್ಲದ ಪ್ರಮುಖ ತಾಣಗಳು
ಬೆಂದೂರ್‌ವೆಲ್‌, ಪಿವಿಎಸ್‌ ಜಂಕ್ಷನ್‌, ಸೆಂಟ್ರಲ್‌ ಮಾರ್ಕೆಟ್‌ ರಸ್ತೆಯ ಕೆಲವು ಭಾಗಗಳು, ಕಂಕನಾಡಿ ಗಣೇಶ್‌ ಮೆಡಿಕಲ್‌ ಎದುರು ಇತ್ಯಾದಿ.

-  ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next