ಗದಗ: ಹತ್ತಾರು ಕುಂದುಕೊರತೆ ಹೊತ್ತು ಬರುವ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸುವ ಜಿಲ್ಲಾಡಳಿತ ತನ್ನ ಭವನದಲ್ಲೇ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸುವ ಮೂಲಕ ಪ್ರತಿನಿತ್ಯ ನೂರಾರು ಜನರಿಗೆ ಜ್ಞಾನದಾಸೋಹ ನೀಡುತ್ತಿದೆ.
ಜಿಲ್ಲಾಡಳಿತ ಭವನದಲ್ಲಿರುವ ಹತ್ತಾರು ಇಲಾಖೆಗಳಿಗೆ ನಿತ್ಯ ಬರುವ ಸಾವಿರಾರು ಜನರು ಅಧಿಕಾರಿಗಳಿಗೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾದರೆ ಜನರು ದಿನಪತ್ರಿಕೆ ಹಾಗೂ ಸಾಹಿತ್ಯ ಪುಸ್ತಕ ಓದುವ ಮೂಲಕ ಸಮಯ ಸದ್ವಿನಿಯೋಗ ಮಾಡಿಕೊಳ್ಳಬಹುದೆಂಬ ಉದ್ದೇಶದಿಂದ ಈ ಗ್ರಂಥಾಲಯ ಆರಂಭಿಸಲಾಗಿದೆ. 2018ರ ಮೇ 17ರಂದು ಲೋಕಾರ್ಪಣೆ ಗೊಂಡಿರುವ ವಾಚನಾಲಯಕ್ಕೆ ಪ್ರತಿನಿತ್ಯ 100ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದು, ಇಲ್ಲಿ ಗರಿಷ್ಠ 30 ಜನರಿಗೆ ಆಸನಗಳೊಂದಿಗೆ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿದೆ.
ಗ್ರಂಥಾಲಯದಲ್ಲಿ ಏನಿವೆ: 12 ಕನ್ನಡ ದಿನಪತ್ರಿಕೆಗಳು, 4 ಆಂಗ್ಲ ದಿನಪತ್ರಿಕೆಗಳು, ತಲಾ ಒಂದು ವಾರಪತ್ರಿಕೆ, ಮಾಸಪತ್ರಿಕೆ ಪತ್ರಿಕೆ, 8 ಇಂಗ್ಲಿಷ್ ಮ್ಯಾಗಜಿನ್‌ಗಳು ಬರುತ್ತಿವೆ. ಅದರೊಂದಿಗೆ ಕನ್ನಡ, ಆಂಗ್ಲ ಸಾಹಿತ್ಯಿಕ ಪುಸ್ತಕಗಳು, ರಾಷ್ಟ್ರ ನಾಯಕರ ಜೀವನ ಚರಿತ್ರೆ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ, ಜೀವಶಾಸ್ತ್ರ, ಸಸ್ಯಶಾಸ್ತ್ರ ಸೇರಿದಂತೆ ಸಂಗೀತ, ಕಲೆ, ಸಾಹಿತ್ಯ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತಾ ಪುಸ್ತಕಗಳು, ಜತೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿ ಸಿದ ರೆಫರೆನ್ಸ್ ಪುಸ್ತಕಗಳು, ಕಾನೂನಿಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ 1730ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ.
ಶೂನ್ಯ ಬಂಡವಾಳದಲ್ಲಿ ಸ್ಥಾಪನೆ:ಈ ಹಿಂದೆ ಜಿಲ್ಲಾಡಳಿತ ಭವನದಲ್ಲಿ ಬಿಕೋ ಎನ್ನುತ್ತಿದ್ದ ಸಾರ್ವಜನಿಕ ನಿರೀಕ್ಷಣಾಲಯವನ್ನೇ ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ. ಧಾರವಾಡದ ಕೇಂದ್ರ ಗ್ರಂಥಾಲಯದಲ್ಲಿ ಹೆಚ್ಚುವರಿಯಾಗಿದ್ದ ರ್ಯಾಕ್‌ಗಳನ್ನು ತರಿಸಲಾಗಿದೆ. ಜಿಲ್ಲಾಡಳಿತ ಭವನದಲ್ಲಿ ಮೂಲೆ ಸೇರಿದ್ದ 30ಕ್ಕೂ ಹೆಚ್ಚು ಕುರ್ಚಿಗಳನ್ನು ದುರಸ್ತಿಗೊಳಿಸಿ ಆಸನ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯ ಇಲಾಖೆಯಿಂದ ಲಭ್ಯವಿರುವ ನೂರಾರು ಪುಸ್ತಕಗಳನ್ನೇ ಇಲ್ಲಿಗೆ ಸರಬರಾಜು ಮಾಡಲಾಗಿದೆ. ಶೂನ್ಯ ಬಂಡವಾಳದಲ್ಲಿಯೇ ಗ್ರಂಥಾಲಯ ಸ್ಥಾಪಿಸಲಾಗಿದೆ ಎನ್ನುತ್ತಾರೆ ಗ್ರಂಥಾಲಯ ಅಧಿಕಾರಿಗಳು.
ಜಿಲ್ಲಾಡಳಿತ ಭವನದಲ್ಲಿ ವಾಚನಾಲಯ ಸ್ಥಾಪನೆಯಾದಾಗಿನಿಂದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲೂ ಓದುವ ಆಸಕ್ತಿ ಹೆಚ್ಚಿದೆ. ಅದಕ್ಕಾಗಿ ಅನೇಕರು ಕಾರ್ಡ್ ಕೂಡಾ ಮಾಡಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಹೆಚ್ಚು ಪುಸ್ತಕಗಳನ್ನು ಸರಬರಾಜು ಮಾಡಿದರೆ ಓದುಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಗ್ರಂಥಾಲಯಕ್ಕೆ ಪ್ರತಿನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಬಹುತೇಕರು ಪತ್ರಿಕೆಗಳನ್ನು ಕಣ್ಣಾಡಿಸುತ್ತಾರೆ. ಆದರೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ತಮ್ಮ ಬಿಡುವಿನ ವೇಳೆ ಬಂದು ತಮಗೆ ಬೇಕಾದ ಪುಸ್ತಕಗಳನ್ನು ಓದುತ್ತಾರೆ. ಹಿಂದಿಗಿಂತ ಈಗ ಓದುಗರ ಸಂಖ್ಯೆ ಹೆಚ್ಚಿದೆ. –
ಮುತ್ತಣ್ಣ ಹೊಸಹಳ್ಳಿ, ಗ್ರಂಥಾಲಯ ಸಿಬ್ಬಂದಿ.
-ವೀರೇಂದ್ರ ನಾಗಲದಿನ್ನಿ