ನವದೆಹಲಿ:ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಎರಡು ಮಕ್ಕಳ ನೀತಿಯನ್ನು ಅನುಷ್ಠಾನಗೊಳಿಸಲು
ಸಜ್ಜಾಗುತ್ತಿರುವಂತೆಯೇ ವಾದ, ಪ್ರತಿವಾದಗಳು ಮತ್ತೆ ಆರಂಭಗೊಂಡಿದೆ. ಏತನ್ಮಧ್ಯೆ ಬಾಲಿವುಡ್ ನಟ ಅಮೀರ್ ಖಾನ್ ಅವರಂತ ಜನರು ದೇಶದಲ್ಲಿನ ಜನಸಂಖ್ಯೆಯ ಅಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಸುಧೀರ್ ಗುಪ್ತಾ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ತಾಲಿಬಾನ್ ಹಿಡಿತಕ್ಕೆ ಲಷ್ಕರ್, ಜೈಶ್ ಸಹಕಾರ
ಭಾನುವಾರ(ಜುಲೈ 11) ವಿಶ್ವಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಮಧ್ಯಪ್ರದೇಶದ ಮಂದ್ ಸೌರ್ ಲೋಕಸಭಾ ಕ್ಷೇತ್ರದ ಸಂಸದ ಗುಪ್ತಾ ಅವರು ಮಾತನಾಡುತ್ತ, ಇತ್ತೀಚೆಗಷ್ಟೇ ಅಮೀರ್ ಖಾನ್ ವಿವಾಹ ವಿಚ್ಛೇದನಗೊಂಡಿದ್ದ ವಿಷಯ ಪ್ರಸ್ತಾಪಿಸಿ, ಅವರು ತಮ್ಮ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅಷ್ಟೇ ಅಲ್ಲ ಮೂರನೇ ಪತ್ನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಟೀಕಿಸಿರುವುದಾಗಿ ವರದಿ ತಿಳಿಸಿದೆ.
ದೇಶದಲ್ಲಿನ ಜನಸಂಖ್ಯೆಯ ಹೆಚ್ಚಳಕ್ಕೆ ಅಮೀರ್ ಖಾನ್ ಅವರಂತಹ ಜನರು ಪಾತ್ರವಹಿಸುತ್ತಿರುವುದು ವಿಪರ್ಯಾಸ ಎಂದು ಗುಪ್ತಾ ಹೇಳಿರುವುದಾಗಿ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ. ದೇಶದಲ್ಲಿನ ಜನಸಂಖ್ಯೆ 140 ಕೋಟಿ ಸಮೀಪಿಸುತ್ತಿದೆ. ಆದರೆ ದೇಶದಲ್ಲಿ ಒಂದು ಇಂಚು ಭೂಮಿಯೂ ವಿಸ್ತಾರವಾಗಿಲ್ಲ, ಇದು ನಿಜಕ್ಕೂ ಉತ್ತಮ ಸುದ್ದಿಯಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.
ತನ್ನ ಮತ್ತು ಕಿರಣ್ ನಡುವಿನ 15 ವರ್ಷದ ದಾಂಪತ್ಯ ಜೀವನ ಕೊನೆಗೊಳಿಸುವುದಾಗಿ ಜುಲೈ 3ರಂದು ನಟ ಅಮೀರ್ ಖಾನ್ ಘೋಷಿಸಿದ್ದರು. ಬಾಡಿಗೆ ತಾಯಿ ಮೂಲಕ ಮಗ ಆಜಾದ್ ರಾವ್ ಖಾನ್ ಜನಿಸಿರುವುದಾಗಿ 2011ರ ಡಿಸೆಂಬರ್ 5ರಂದು ಅಮೀರ್ ಮತ್ತು ಕಿರಣ್ ಘೋಷಿಸಿದ್ದರು.