Advertisement
ಎರಡೂ ಸರಕಾರಗಳು ತಮ್ಮ ರಾಜಕೀಯ ಇಚ್ಛಾಶಕ್ತಿಯಿಂದ ಹೊರ ಬರಲಿಲ್ಲ. ಮಾನವೀಯತೆ ಆಧಾರದ ಮೇಲೆ ಎಂಬ ಶಬ್ದ ಅರ್ಥ ಕಳೆದುಕೊಂಡಿತು. ಜನರ ಹೋರಾಟಗಳು ಕೊಯ್ನಾ, ವಾರಣಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ತರಲಿಲ್ಲ. ಸರಕಾರದಿಂದ ಮಹಾರಾಷ್ಟ್ರಕ್ಕೆ ಸರ್ವಪಕ್ಷಗಳ ನಿಯೋಗ ಒಯ್ಯಬೇಕೆಂಬ ಒತ್ತಾಯ ಸಹ ಬಲವಾಗಲಿಲ್ಲ.
Related Articles
Advertisement
ಮುಂಗಾರು ಮಳೆ ಆರಂಭವಾಗುವ ಸಂದರ್ಭದಲ್ಲೇ ರಾಜಾಪುರ ಬ್ಯಾರೇಜ್‌ನ 14 ಗೇಟ್‌ಗಳನ್ನು ತೆರೆಯಲಾಗಿದ್ದು ಅಂದಾಜು 1200 ರಿಂದ 1500 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಕೆಲದಿನಗಳ ಹಿಂದೆಯೂ ಇದೇ ಬ್ಯಾರೇಜ್‌ನಿಂದ 9 ಗೇಟುಗಳನ್ನು ತೆರೆದು ಬಿಡುಗಡೆ ಮಾಡಿದ ನೀರು ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಚಂದೂರು, ಎಡೂರು, ಕಲ್ಲೋಳ ಗ್ರಾಮಗಳನ್ನು ತಲುಪಿತ್ತು.
ಈ ಹಿಂದೆ ಅಂದರೆ 2005-06ರಲ್ಲಿ ಇದೇ ರೀತಿ ತನ್ನ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದ ಮಹಾರಾಷ್ಟ್ರ ಅನಂತರ ವ್ಯಾಪಕ ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿದ್ದರಿಂದ ಕೃಷ್ಣಾ ನದಿಗೆ ಐದು ಲಕ್ಷಕ್ಕೂ ಅಧಿಕ ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿತ್ತು. ಇದರಿಂದ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳಲ್ಲಿ ಹಲವಾರು ಹಳ್ಳಿಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಅಪಾರ ಹಾನಿ ಸಂಭವಿಸಿತ್ತು.
ಮಹಾರಾಷ್ಟ್ರ ಸರಕಾರ ನೀರಿಗೆ ಬದಲಾಗಿ ನೀರು ಷರತ್ತು ಇಟ್ಟಿದ್ದು ಹೊಸದೇನಲ್ಲ. ಮೂರು ವರ್ಷಗಳ ಹಿಂದೆಯೇ ಕರ್ನಾಟಕ ಸರಕಾರದ ಮುಂದೆ ಈ ಪ್ರಸ್ತಾಪ ಬಂದಿತ್ತು. ಈ ಪ್ರಸ್ತಾವನೆಯಂತೆ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ನಾಲ್ಕು ಟಿಎಂಸಿ ಅಡಿ ನೀರನ್ನು ಕರ್ನಾಟಕ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮಹಾರಾಷ್ಟ್ರದ ಜತ್ತ ಹಾಗೂ ಅಕ್ಕಲಕೋಟೆಗೆ ಬಿಡಬೇಕು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತನ್ನ ಜಲಾಶಯದಿಂದ ಕರ್ನಾಟಕಕ್ಕೆ ನಾಲ್ಕು ಟಿಎಂಸಿ ನೀರನ್ನು ಬಿಡುವ ಪ್ರಸ್ತಾವನೆ ಇತ್ತು. ಆದರೆ ಇದಾವುದೂ ಅನುಷ್ಠಾನಕ್ಕೆ ಬರಲೇ ಇಲ್ಲ.
ಈ ಹಿಂದೆ ಅಂದರೆ 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀರಿಗೆ ಬದಲಾಗಿ ನೀರು ಬೇಕೆಂಬ ಮಹಾರಾಷ್ಟ್ರದ ಷರತ್ತಿನ ಬಗ್ಗೆ ಚರ್ಚಿಸಲಾಗಿತ್ತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದರ ಬಗ್ಗೆ ಗಂಭೀರ ಚರ್ಚೆ ಸಹ ನಡೆದಿತ್ತು. ಆನಂತರ ಬೆಳಗಾವಿ ಹಾಗೂ ಬೆಂಗಳೂರು ಅಧಿವೇಶನದಲ್ಲಿ ಸ್ವತಃ ನಾನೇ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರ ಪರಿಣಾಮ ಈ ವರ್ಷ ಭೀಕರ ಬರದಲ್ಲಿ ನಮಗೆ ನೀರು ಸಿಗದಂತಾಯಿತೆಂದು ಮಾಜಿ ಶಾಸಕ ಲಕ್ಷ್ಮಣ ಸವದಿ ನೆನಪಿಸಿಕೊಂಡಿದ್ದಾರೆ.
ಈಗ ಕೃಷ್ಣಾ ನದಿಗೆ ಬಂದಿರುವ ನೀರು ಬ್ಯಾರೇಜ್‌ಗಳಲ್ಲಿ ಸಂಗ್ರಹವಾಗಿದ್ದು. ಕೊಯ್ನಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಅಲ್ಲಿಂದ ನೀರು ಬಿಡುವ ಸ್ಥಿತಿ ಇಲ್ಲ. ಮಹಾಬಳೇಶ್ವರದಲ್ಲಿ ಇನ್ನೂ ಮಳೆ ಆರಂಭವಾಗಿಲ್ಲ. ರಾಜಾಪುರದಲ್ಲಿ ಮಳೆಯಿಂದ ಸಂಗ್ರಹ ನೀರನ್ನು ಹೊರಗಡೆ ಬಿಡಲಾಗುತ್ತಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
•ಕೇಶವ ಆದಿ