Advertisement

ಮನೆಗೆ ಸಾಮಗ್ರಿ ಬರದೇ ಜನರೇ ಬಂದ್ರು ಮಾರುಕಟ್ಟೆಗೆ!

05:54 PM Mar 27, 2020 | Suhan S |

ಬೆಳಗಾವಿ: ಕೋವಿಡ್‌-19 ಸೋಂಕು ಹರಡದಂತೆ ಕ್ರಮಕ್ಕೆ ಮುಂದಾಗಿರುವ ಸರ್ಕಾರದ ಆದೇಶ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದರೂ ವಾಹನ ಸವಾರರು ಅನಾವಶ್ಯಕವಾಗಿ ನಗರ ಪ್ರವೇಶಿಸುತ್ತಿದ್ದಾರೆ. ಗುರುವಾರವೂ ವಾಹನ ಸವಾರರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವುದು ಕಂಡು ಬಂತು. ಜೀವನಾವಶ್ಯಕ ವಸ್ತು ಖರೀದಿಗೂ ಜನ ಮುಗಿ ಬಿದ್ದಿದ್ದರು.

Advertisement

ಜೀವನಾವಶ್ಯಕ ವಸ್ತುಗಳ ಖರೀದಿಗೆ ಜನರು ತಂಡೋಪತಂಡವಾಗಿ ಬಂದಿದ್ದರು. ತರಕಾರಿ ಖರೀದಿಸಲು ನಗರದ ಕೋತವಾಲ ಗಲ್ಲಿಯಲ್ಲಿ ಜನಜಂಗುಳಿ ಆಗಿ ಸಂತೆಯೇ ನಿರ್ಮಾಣವಾಗಿತ್ತು. ಅಗತ್ಯ ಸಾಮಗ್ರಿಗಳನ್ನು ಮನೆ ಮನೆ ಮನೆ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರೂ ಇನ್ನೂವರೆಗೆ ಯಾವುದೇ ವಸ್ತುಗಳು ಪೂರೈಕೆ ಆಗುತ್ತಿಲ್ಲ. ಅನಿವಾರ್ಯವಾಗಿ ಜನರು ಮಾರುಕಟ್ಟೆಗೆ ಬಂದು ಖರೀದಿಯಲ್ಲಿ ತೊಡಗಿದ್ದಾರೆ. ಖರೀದಿ ಸಮಯವನ್ನೂ ನಿಗದಿ ಮಾಡಿಲ್ಲ. ಹೀಗಾಗಿ ಬೆಳ್ಳಂಬೆಳಗ್ಗೆ ಜನರು ಮಾರುಕಟ್ಟೆಯತ್ತ ಧಾವಿಸುತ್ತಿದ್ದಾರೆ. ಇಲ್ಲಿ ಜನಜಂಗುಳಿಯಿಂದಾಗಿ ಯಾವುದೇ ರೂಪರೇಷೆ ಹಾಕಿಕೊಳ್ಳದೇ ಬೇಕಾಬಿಟ್ಟಿಯಾಗಿ ಖರೀದಿ ನಡೆಯುತ್ತಿದೆ.

ತಳ್ಳುಗಾಡಿಗಳ ಮೂಲಕ ತರಕಾರಿ ಪೂರೈಸಲು ಅನೇಕ ವ್ಯಾಪಾರಸ್ಥರು ನಿರ್ಧರಿಸಿದ್ದರೂ ಗುರುವಾರ ನಗರದ ಅನೇಕ ಬಡಾವಣೆಗಳಿಗೆ ತರಕಾರಿ ಪೂರೈಕೆ ಆಗಿಲ್ಲ. ರಿಲೈನ್ಸ್‌ ಫ್ರೆಷ್‌, ಮೋರ್‌ ಸೇರಿದಂತೆ ಇತರೆ ಅಂಗಡಿಗಳಲ್ಲಿ ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ನಗರದ ಬಹುತೇಕ ಅಂಗಡಿಗಳು ತೆರೆದಿದ್ದವು. ಗುಂಪುಗೂಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ದಿಷ್ಟ ಅಂತರದ ಗುರುತು ಹಾಕಲಾಗಿದೆ. ಆದರೆ ಯಾವುದೇ ಅಂತರ ಇಲ್ಲದೇ ತರಕಾರಿ ಮಾರಾಟ ಅವ್ಯಾಹತವಾಗಿ ನಡೆದಿತ್ತು.

ನಿರಾತಂಕವಾಗಿ ತಿರುಗಾಡಿದ ಸವಾರರು: ನಗರದಲ್ಲಿ ವಾಹನಗಳು ಬುಧವಾರಕ್ಕಿಂತ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು. ವಾಹನಗಳು ಓಡಾಡುತ್ತಿದ್ದರೂ ಪೊಲೀಸರು ತುಸು ಸಡಿಲು ಬಿಟ್ಟಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ವಾಹನ ಸವಾರರು ನಗರ ಪ್ರವೇಶಿಸುತ್ತಿದ್ದರು. ಆದರೆ ಅನಾವಶ್ಯಕವಾಗಿ ಬಂದಿದ್ದ ವಾಹನ ಸವಾರನಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಜೋರಾಗಿ ಹೋಗುವಾಗ ಸವಾರ ಸ್ಕಿಡ್‌ ಆಗಿ ಬಿದ್ದ ಘಟನೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next