ಬೆಳಗಾವಿ: ಬ್ಯಾಡಾ ಬ್ಯಾಡಾ ಅಂದ್ರು ಭಗವಂತ ಬಿಡವಲ್ಲ. ಇನ್ನೂ ಏನೇನ ಅನಾಹುತ ಕಾದಿದೆಯೊ. 70 ವರ್ಷದಿಂದ ಹೊಳಿ ನೋಡಕೋತ ಬಂದೇನಿ. ಆದರೆ ಯಾವತ್ತೂ ಈ ರೀತಿ ಬಂದಿರಲಿಲ್ಲ. ಆನಾಹುತಗಳು ಆಗಿರಲಿಲ್ಲ. ಈಗ ಹೊಳಿ ಅಂದರ ಊರಿನವರಿಗೆ ಹೆದರಿಕೆ ಆಗ್ತದ. ಎಲ್ಲಾ ಕಳಕೊಂಡು ಈಗ ನೀರು ನೋಡಕೋತ ನಿಂತೇವಿ.
ಇದು ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದ ನೆರೆ ಸಂತ್ರಸ್ತರ ನೋವಿನ ಮಾತು. ಅಡಿಬಟ್ಟಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡಿದ್ದು ನೆಲಕ್ಕೊರಗಿದ ನೂರಾರು ಮನೆಗಳ ಅವಶೇಷ, ಅಲ್ಲಲ್ಲಿ ಬಿದ್ದಿರುವ ವಿದ್ಯುತ್
ಕಂಬಗಳು. ಸರಕಾರದಿಂದ ಪರಿಹಾರ ಬರುತ್ತದೆ. ಶಾಶ್ವತ ಸೂರಿನ ಆಸರೆ ಸಿಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಟ್ಟೆಯ ಮೇಲೆ ಕುಳಿತಿದ್ದ ಜನ. ಗ್ರಾಮದ ಜನರನ್ನು ಮಾತನಾಡಿಸಿದಾಗ ಕೇಳಿ ಬಂದಿದ್ದು ಒಂದೇ ಮಾತು. ಹೇಳಲಿಕ್ಕೆ ಏನು ಉಳಿದಿದೆ. ಎಲ್ಲಾ ನಿಮ್ಮ ಕಣ್ಣಮುಂದೇ ಇದೆ.
ಗೋಕಾಕ ಪಟ್ಟಣದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಅಡಿಬಟ್ಟಿಗ್ರಾಮ ಘಟಪ್ರಭಾ ನದಿಗೆ ಹೊಂದಿಕೊಂಡೇ ಇದೆ. ಈ ವರ್ಷ ಮೂರು ಬಾರಿ ಭೀಕರ ಪ್ರವಾಹ ಕಂಡಿರುವ ಅಡಿಬಟ್ಟಿ ಗ್ರಾಮದ ಜನ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಮನೆಗಳು ನೆಲಸಮವಾಗಿವೆ. ಬೆಳೆಗಳು ನೀರು ಪಾಲಾಗಿವೆ. ಮನೆಯ ಮುಂದೆ ನದಿಯಲ್ಲಿ ತೇಲಿಕೊಂಡು ಬಂದ ಕಸದ ರಾಶಿ ಬಿದ್ದಿದೆ. ಇದರಿಂದ ದುರ್ವಾಸನೆ ಆರಂಭವಾಗಿದೆ. ಪ್ರವಾಹದ ನಂತರ ರೋಗ ರುಜಿನಗಳ ಭಯ ಕಾಡುತ್ತಿದೆ.
ಇದು ಕೇವಲ ಅಡಿಬಟ್ಟಿ ಗ್ರಾಮಕ್ಕೆ ಮಾತ್ರ ಸೀಮಿತವಾದ ನೋವಲ್ಲ. ಹಾನಿಯ ವಾಸ್ತವ ಸ್ಥಿತಿ ಅಲ್ಲ. ಜಿಲ್ಲೆಯಲ್ಲಿ ಈ ಬಾರಿ ಭೀಕರ ನೆರೆ ಹಾವಳಿಗೆ ತುತ್ತಾದ ನದಿ ತೀರದ ಗ್ರಾಮಗಳ ಜನರ ಕಥೆ ಇದೇ ರೀತಿಯಾಗಿದೆ. ಗ್ರಾಮಕ್ಕೆ ಬಂದವರಿಗೆ ತೋರಿಸಲು ಬೇಕಾದಷ್ಟಿದೆ.ಅದನ್ನು ನೋಡಿ ನಮಗೆ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ನೀಡಬೇಕು ಎಂಬುದು ಸಂತ್ರಸ್ತರ ಅಳಲು. ಕೃಷಿಯಿಂದ ಸಮೃದ್ಧವಾಗಿರುವ ಅಡಿಬಟ್ಟಿ ಗ್ರಾಮದಲ್ಲಿ ಘಟಪ್ರಭಾ ನದಿ ಈ ಬಾರಿ ಎಂದೂ ಮರೆಯದಂತಹ ಪೆಟ್ಟು ಕೊಟ್ಟಿದೆ.
ಒಂದೇ ವರ್ಷದಲ್ಲಿ ಆಗಸ್ಟ್, ಸೆಪ್ಟಂಬರ್ ಹಾಗೂ ಈಗ ಅಕ್ಟೋಬರ್‌ದಲ್ಲಿ ಬಂದ ಭೀಕರ ಪ್ರವಾಹ ಹಾಗೂ ಅತಿಯಾದ ಮಳೆ ಗ್ರಾಮದ ಜೀವನ ವ್ಯವಸ್ಥೆಯನ್ನೇ ಹಾಳುಮಾಡಿದೆ. ನದಿಯ ಪಕ್ಕದಲ್ಲೇ ಇದ್ದರೂ ಎಂದೂ ಅದಕ್ಕೆ ಅಂಜದ ಗ್ರಾಮದ ಜನ ಈಗ ನೀರು ಎಂದರೆ ಸಾಕು ಹೌಹಾರುತ್ತಾರೆ. ಮೊದಲ ಬಾರಿಗೆ ಗ್ರಾಮಸ್ಥರಿಗೆ ಹೊಳೆಯ ಅಂಜಿಕೆ ಆರಂಭವಾಗಿದೆ. ಸುಮಾರು 2000 ಜನಸಂಖ್ಯೆ ಇರುವ ಗ್ರಾಮದಲ್ಲಿ ಬೆರಳಣಿಕೆಯಷ್ಟು ಮನೆಗಳು ನೋಡಲು ಗಟ್ಟಿಮುಟ್ಟು ಎನಿಸುತ್ತವೆ. ಹಳೆಯ ಮನೆಗಳ ಜೊತೆಗೆ ಈಗೀಗ ಕಟ್ಟಿದ ಮನೆಗಳು ಸಹ ನೀರು ಪಾಲಾಗಿವೆ. ಸರಕಾರಿ ಶಾಲೆಯ ಮೂರು ಕೊಠಡಿಗಳು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಈ ಕೊಠಡಿಗಳಿಗೆ ಅಸುರಕ್ಷಿತ ಕೊಠಡಿಗಳು ಎಂಬ ಫಲಕ ಸಹ ಹಾಕಲಾಗಿದೆ.
-ಕೇಶವ ಆದಿ