ಹುಬ್ಬಳ್ಳಿ: ನಗರದ ವಿವಿಧೆಡೆ ಗುರುವಾರದಿಂದ ಜಿಲ್ಲಾಡಳಿತದಿಂದ ಆರಂಭಿಸಿರುವ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ಮಾರುಕಟ್ಟೆ ಜನರು ಬೆಚ್ಚಿ ಬಿದ್ದಿದ್ದು, ಟೆಸ್ಟ್ ಮಾಡಲು ವಾಹನ ಬರುತ್ತದೆ ಎಂದರೆ ಸಾಕು ಅಂಗಡಿ ಬಾಗಿಲು ಬಂದ್ ಮಾಡಿ ಮನೆಯತ್ತ ದೌಡಾಯಿಸುತ್ತಿದ್ದಾರೆ.
ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳು ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಜಿಲ್ಲಾಡಳಿತ ಕೋವಿಡ್ ವೈರಸ್ ಸೋಂಕು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಆದರೆ ಇದಕ್ಕೆ ಜನರ ಅಸಹಕಾರ ಹೆಚ್ಚಾಗುತ್ತಿದೆ. ರೋಗ ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದ್ದು, ಅವರ ಅಂಗಡಿ, ಮಾರುಕಟ್ಟೆಗಳಿಗೆ ಅವರು ಇರುವಲ್ಲಿಯೇ ಹೋಗಿ ಟೆಸ್ಟ್ ಮಾಡುತ್ತಿದ್ದಾರೆ. ಕೆಲವೊಂದಿಷ್ಟು ಜನರಿಗೆ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕೋವಿಡ್ ಪಾಜಿಟಿವ್ ಬರುತ್ತಿರುವ ಹಿನ್ನೆಲೆಯಲ್ಲಿ ಬೆಚ್ಚಿ ಬೀಳುತ್ತಿರುವ ಜನರು ನಮಗ್ಯಾಕೆ ಇಲ್ಲದ ರಗಳೆ ಎನ್ನುತ್ತಾ ಅಂಗಡಿಗಳನ್ನು ಬಂದ್ ಮಾಡಿ ಕಾಲ್ಕಿಳುತ್ತಿದ್ದಾರೆ.
ಶುಕ್ರವಾರ ನಗರದ ದುರ್ಗದ ಬಯಲು, ಜನತಾ ಬಜಾರ, ದಾಜೀಬಾನ ಪೇಟೆ, ಕಂಚಗಾರ ಗಲ್ಲಿ, ಎಂ.ಜಿ.ಮಾರುಕಟ್ಟೆ, ಹಿರೇಪೇಟೆ, ಭೂಸಪೇಟೆ, ಬಾರದಾನ ಸಾಲ, ಶಿಂಪಿಗಲ್ಲಿ, ಸ್ಟೇಶನ್ ರಸ್ತೆ, ಕೋಯಿನ್ ರಸ್ತೆ, ಕೊಪ್ಪಿಕರ ರಸ್ತೆ ಹಾಗೂ ಹಳೇ ಹುಬ್ಬಳ್ಳಿ ಭಾಗದಲ್ಲಿ ಅಂಗಡಿಕಾರರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಹೋಗಿದ್ದಾರೆ. ಒಂದೆಡೆ ರಾಜ್ಯ ಸರಕಾರ, ಜಿಲ್ಲಾಡಳಿತ ಕೋವಿಡ್ ದಿಂದ ಮುಕ್ತಿ ಹೊಂದಬೇಕೆನ್ನುವ ದೃಷ್ಟಿಯಿಂದ ಎಲ್ಲೆಡೆ ರೋಗ ತಪಾಸಣೆಗೆ ಮುಂದಾದರೆ ಜನರು ಭಯದಿಂದ ತಪಾಸಣೆಗೆ ಆಗಮಿಸದೆ ತಪ್ಪಿಸಿಕೊಂಡು ಓಡಿ ಹೋಗುತ್ತಿರುವುದು ಕಂಡು ಬರುತ್ತಿದೆ.
ಬೆಳಿಗ್ಗೆ-ಸಂಜೆ ವಹಿವಾಟು: ಬೆಳಿಗ್ಗೆ ಎಂದಿನಂತೆ ವ್ಯಾಪಾರ ವಹಿವಾಟು ಆರಂಭಿಸಿದ ವ್ಯಾಪಾರಸ್ಥರು, ಕೋವಿಡ್ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲು ಬಂದಿದ್ದಾರೆನ್ನುವ ಸುದ್ದಿ ತಿಳಿಯುತಿದ್ದಂತೆಯೋ ತಮ್ಮ ತಮ್ಮ ಅಂಗಡಿಗಳ ಶಟರ್ಸ್ ಎಳೆದು, ಜಾಗ ಖಾಲಿ ಮಾಡುತ್ತಿದ್ದಾರೆ. ಇನ್ನು ಕೆಲವರೂ ತಮಗೆ ಪರಿಚಯಸ್ಥರಿಗೆ ದೂರವಾಣಿ ಕರೆ ಮಾಡಿ ಕೋವಿಡ್ ಪರೀಕ್ಷೆಗೆ ಬರುತ್ತಿದ್ದಾರೆ ಅಂಗಡಿ ಬಂದ್ ಮಾಡಿ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಬೆಳಿಗ್ಗೆ ಬಂದ್ ಆಗುವ ಅಂಗಡಿ-ವ್ಯಾಪಾರ ಮಳಿಗೆಗಳು ಸಂಜೆ ವೇಳೆಗೆ ಅರ್ಧ ಬಾಗಿಲು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂತು. ಕಕ್ಕಾಬಿಕ್ಕಿಯಾದ ಜನರು: ಮಾರುಕಟ್ಟೆಗೆ ಆಗಮಿಸಿದ ಜನರು ಅಂಗಡಿ ಬಂದ್ ಮಾಡುತ್ತಿರುವುದು ಹಾಗೂ ಮಾರುಕಟ್ಟೆಯಿಂದ ಎಲ್ಲರೂ ಕಾಲ್ಕಿಳುತ್ತಿರುವುದನ್ನು ನೋಡಿ ಇಲ್ಲಿ ಏನೋ ನಡೆಯುತ್ತಿದೆ ಎನ್ನುವುದು ತಿಳಿಯದಾದರೂ ಎಷ್ಟೂ ಜನರು ಮಾರುಕಟ್ಟೆಗೆ ಆಗಮಿಸಿ ಅಂಗಡಿ ಬಂದ್ ಆಗಿರುವುದನ್ನು ನೋಡಿ ಮರುಳಿ ಹೋಗುತ್ತಿರುವುದು ಕಂಡು ಬಂತು. ಇನ್ನು ಕೆಲವು ಕಡೆ ಒಂದೇ ಬಾಗಿಲು ತೆರೆದು ಲಘುಬಗೆಯಲ್ಲಿ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ನೀಡುತ್ತಿರುವುದು ಕಂಡು ಬಂತು.
ಕೋವಿಡ್ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿದವರಲ್ಲಿ ಬಹುತೇಕರಿಗೆ ಪಾಜಿಟಿವ್ ಎಂದು ಬರುತ್ತಿದ್ದು, ಇದರಿಂದ ಅದನ್ನು ಟೆಸ್ಟ್ ಮಾಡಿಸುವುದು ಬೇಡವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಇದರಿಂದ ನಮ್ಮೆಲ್ಲ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳುತ್ತದೆ. ನಮ್ಮಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಕೂಡಾ ಪಾಜಿಟಿವ್ ತೋರಿಸುತ್ತದೆ ಎಂದರೆ ಅದು ಹೇಗೆ ಎನ್ನುವುದೇ ನಮಗೆ ತಿಳಿಯುತ್ತಿಲ್ಲ. ಆದ್ದರಿಂದ ಮಧ್ಯಾಹ್ನವೇ ಅಂಗಡಿ ಬಂದ್ ಮಾಡಿ ಹೊರಟ್ಟಿದ್ದೇವೆ. –
ಶ್ರೀಧರ, ವ್ಯಾಪಾರಸ್ಥ
-ಬಸವರಾಜ ಹೂಗಾರ