ಕೊಪ್ಪಳ: ಇದೊಂದು ಪುಟ್ಟ ಗ್ರಾಮ. ವರ್ಷಕೊಮ್ಮೆ ಇಲ್ಲಿ ಲಕ್ಷಾಂತರ ಜನ ಸೇರ್ತಾರೆ. ಮೃಗಶಿರಾ ಮಳೆ ಆರಂಭವಾಗುವ ಘಳಿಗೆಯಲ್ಲಿ ಇಲ್ಲಿ ಜನವೋ ಜನ. ಹಾಗಂತ ಇಲ್ಲಿ ಜಾತ್ರೆ ಉತ್ಸವ ನಡೆಯುವುದಿಲ್ಲ. ಬದಲಾಗಿ ಗ್ರಾಮದ ಕುಲಕರ್ಣಿ ಕುಟುಂಬದವರು ಕಳೆದ 65 ವರ್ಷದಿಂದ ಅಸ್ತಮಾ ಕಾಯಿಲೆಗೆ ಉಚಿತವಾಗಿ ನೀಡುವ ಔಷಧಿ ಪಡೆಯಲು ಜನ ಮುಗಿ ಬೀಳುತ್ತಾರೆ.
ಔಷಧಿ ತರಾರಿಯಲ್ಲಿ ತೊಡಗಿರುವ ಹಿರಿಯ ಜೀವ, ಔಷಧಿ ಪಡೆಯಲು ಗ್ರಾಮಕ್ಕೆ ಬರುವ ಲಕ್ಷಾಂತರ ಜನ ಕುಳಿತುಕೊಳ್ಳಲು ಸಿದ್ದಗೊಂಡಿರುವ ಮೈದಾನ. ಬರುವ ರೋಗಿಗಳಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ಚರ್ಚಿಸುತ್ತಿರುವ ಗ್ರಾಮಸ್ಥರು,ಕೊಪ್ಪಳ ತಾಲೂಕು ಕುಟುಗನಹಳ್ಳಿ ಗ್ರಾಮದಲ್ಲಿ ಕಂಡು ಬಂದ ದೃಶ್ಯವಿದು.
ಕುಲಕರ್ಣಿ ಕುಟುಂಬ ಸದಸ್ಯರು ಅಸ್ತಮಾ ರೋಗಕ್ಕೆ ಪಾರಂಪರಿಕ ಔಷಧ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಜೂನ್ 8 ರಂದು ಮಧ್ಯಾಹ್ನದಿಂದ ಔಷಧಿ ವಿತರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಮೃಗಶಿರಾ ನಕ್ಷತ್ರ ಆರಂಭವಾಗುವ ವೇಳೆಗೆ ಈ ಔಷಧಿ ನೀಡಲಾಗುತ್ತದೆ. ಈ ಬಾರಿ ಜೂನ್ 8ರ ಸಂಜೆ 5ಕ್ಕೆ ಮೃಗಶಿರಾ ಮಳೆ ಕೂಡುವುದರಿಂದ ಈ ವೇಳೆಗೆ ಸರಿಯಾಗಿ ಔಷಧಿ ಸೇವಿಸುವುದರಿಂದ ಅಸ್ತಮಾ ಸಂಪೂರ್ಣ ಗುಣವಾಗುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ರೋಗಿಗಳಿಗಿದೆ.
ಔಷಧಿ ಸೇವಿಸಿದ ಸಾವಿರಾರು ರೋಗಿಗಳು ಗುಣಮುಕ್ತರಾಗಿದ್ದಾರಂತೆ. ಈ ಔಷಧದಿಂದ ಅಸ್ತಮಾ ಮಾತ್ರವಲ್ಲ ಕಾಮಾಲೆ, ಕೆಮ್ಮು ಸೇರಿ ಮತ್ತಿತರ ಕಾಯಿಲೆ ವಾಸಿಯಾಗಿವೆ.
ರಾಜ್ಯದ ಮೂಲೆ ಮೂಲೆಯಿಂದಷ್ಟೇ ಅಲ್ಲದೇ ನೆರೆ ರಾಜ್ಯದಿಂದಲೂ ಸಾವಿರಾರು ಅಸ್ತಮಾ ರೋಗಿಗಳು ಕುಟುಗನಹಳ್ಳಿಗೆ ಬರುತ್ತಾರೆ.
ಅಪೂರ್ವ ಕ್ಷಣಕ್ಕೆ ಸಾವಿರಾರು ಜನರು ಕುಟುಗನಹಳ್ಳಿಯಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚುತ್ತಿರೋದು ವಿಶೇಷ.