ಮಡಿಕೇರಿ: ಅರಣ್ಯ, ಪ್ರಕೃತಿ, ಪರಿಸರ ಉಳಿಯಬೇಕು. ಜತೆಗೆ ಜೀವನ, ಜೀವನೋಪಾಯವೂ ಇರಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಮತ್ತು ಜನ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರವಿವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವರು ಮಾತನಾಡಿದರು. 15 ದಿನಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಮೂರು ಅಮೂಲ್ಯ ಜೀವಗಳು ಹೋಗಿವೆ. ಇದು ಅತ್ಯಂತ ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ತಿಳಿಯಲು ಜಿಲ್ಲೆಗೆ ಬಂದಿರುವುದಾಗಿ ತಿಳಿಸಿದರು.
ಹಿರಿಯ ಅಧಿಕಾರಿಗಳೊಂದಿಗೆ ಆನೆ ದಾಳಿಯಿಂದ ಸಾವುಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ, ಆನೆ ದಾಳಿಯಿಂದ ಮೃತಪಟ್ಟ ಇಬ್ಬರ ಮನೆಗೆ ತೆರಳಿ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿರುವುದಾಗಿ ತಿಳಿಸಿದರು.
ನಾವು ಮೃತರ ಕುಟುಂಬಕ್ಕೆ ಪರಿಹಾರದ ಹಣ ಕೊಡಬಹುದು, ಆದರೆ ಅಮೂಲ್ಯ ಜೀವವನ್ನು ಮರಳಿ ತಂದುಕೊಡಲು ಸಾಧ್ಯವಿಲ್ಲ. ಹೀಗಾಗಿ ಆನೆಗಳು ನಾಡಿಗೆ ಬಂದ ಕೂಡಲೇ ಅವುಗಳನ್ನು ಕಾಡಿಗೆ ಮರಳಿಸಲು ಮತ್ತು ತೋಟಗಳಲ್ಲೇ ಬೀಡು ಬಿಡುವ ಆನೆಗಳನ್ನು ಹಿಡಿದು ಕಾಡಿಗೆ ಕಳುಹಿಸಲು ಕ್ರಮ ಜರಗಿಸುವಂತೆ ಸೂಚಿಸಿದರು.
ಆನೆಗಳನ್ನು ಹಿಡಿಯಲು ಅನುಮತಿಗೆ ಕಾಯುತ್ತಾ ಸಮಯ ವ್ಯರ್ಥ ಮಾಡದಂತೆ ಸೂಚಿಸಿದ ಸಚಿವರು ಜನರ ಮೇಲೆ ದಾಳಿ ಮಾಡುವ ಆನೆಗಳನ್ನು ಗುರುತಿಸಿ ತತ್‌ಕ್ಷಣ ಕಾರ್ಯೋನ್ಮುಖವಾಗುವಂತೆ ಸೂಚಿಸಿದರು.