ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ಅರ್ಧದಲ್ಲಿ ಸ್ಥಗಿತವಾದ ಕಾರಣ ಮೊದಲ ಮಳೆಗೆ ಇಲ್ಲಿನ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಗೆದು ಮಣ್ಣು ಹಾಕಿದ್ದಲ್ಲಿ ಈಗ ಮಳೆಯ ಕಾರಣ ಮಣ್ಣೆಲ್ಲಾ ನೀರಿನೊಂದಿಗೆ ಕೊಚ್ಚಿ ಹೋಗುತ್ತಿದ್ದು, ವ್ಯವಸ್ಥೆಯ ಮೇಲೆ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪರ್ಕಳದ ಬಾಬುರಾಯ ಸರ್ಕಲ್ ಬಳಿ, ಸಿಂಡಿಕೇಟ್ ಬ್ಯಾಂಕಿನ ಎದುರುಗಡೆ ಇರುವ ಗ್ಯಾರೇಜ್, ವೆಲ್ಡಿಂಗ್ ಶಾಪ್, ಫರ್ನೀಚರ್ ಅಂಗಡಿ, ಕಟ್ಟಿಗೆ ಡಿಪೋ ಮೊದಲಾದ ಅಂಗಡಿಗಳಿಗೆ ಮೊದಲ ಮಳೆಯಿಂದ ಪರ್ಕಳ ಪೇಟೆಯ ನೀರು , ಕಾಮಗಾರಿಯ ಕೆಸರು ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತಿದ್ದು, ಅದೂ ಕುಸಿತ ಕಂಡಿದೆ.
ಕಳೆದ ಮೂರು ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಂತು ಹೋಗಿದೆ. ಮೊದಲ ಹಂತದಲ್ಲಿ ಚರಂಡಿ ವ್ಯವಸ್ಥೆ ಮಾಡದೆ ಇಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದೀಗ ಅರ್ಧದಲ್ಲಿ ಕೆಲಸ ನಿಲ್ಲಿಸಲಾಗಿದ್ದು, ಇದರಿಂದ ಸಾರ್ವಜನಿಕರು, ವಾಹನ ಚಾಲಕರು, ಅಂಗಡಿ ಮಾಲೀಕರಿಗೂ ತೊಂದರೆಯಾಗಿದೆ.
ಕಳೆದೆರಡು ತಿಂಗಳಿನಿಂದ ಕೋವಿಡ್ ವೈರಸ್ ಹಾವಳಿಯಿಂದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದ್ದ ವ್ಯಾಪಾರಿಗಳು ಇದೀಗ ಅಂಗಡಿ ಬಾಗಿಲು ತೆಗೆಯಲು ಈ ಹೆದ್ದಾರಿಯ ಕಾಮಗಾರಿಯಿಂದ ತೊಂದರೆ ಆಗಿದೆ ಎಂದು ಸ್ಥಳೀಯ ಅಂಗಡಿಯ ಮಾಲಕ ಪೆರ್ಡೂರು ಮಟ್ಟಿಬೈಲು ಸುಧಾಕರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ತಮಗಾದ ನಷ್ಟವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.