ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಔಟ್ ಡೇಟೆಡ್ ಫೋನ್ ಅನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:Maldives; ಭಾರತೀಯ ಸೇನೆ ಮಾಲ್ಡೀವ್ಸ್ ತೊರೆಯಬೇಕು: ನೂತನ ಅಧ್ಯಕ್ಷ ಮುಯಿಜ್ಜು
ಒಂದು ವೇಳೆ ಬ್ಯಾಟರಿ ಕೆಟ್ಟು ಹೋಗಿದ್ದರೆ, ಅದನ್ನು ಬದಲಾಯಿಸಬಹುದು. ಇಲ್ಲವೇ ರೀಸ್ಟಾರ್ಟ್ ಮಾಡಬಹುದು. ಆದರೆ 2014ರಲ್ಲಿ ಜನರು ಇಂತಹ ಔಟ್ ಡೇಟೆಡ್ ಫೋನ್ ಅನ್ನು ತೊರೆದು, ದೇಶ ಸೇವೆ ಮಾಡಲು ನಮಗೆ ಅವಕಾಶ ನೀಡಿದ್ದಾರೆ ಎಂದು ಪ್ರಧಾನಿ ದೆಹಲಿಯಲ್ಲಿ ನಡೆದ ಟೆಲಿಕಾಂ ಕಾರ್ಯಕ್ರಮದಲ್ಲಿ ಹೇಳಿದರು.
2014 ಬದಲಾವಣೆಯ ವರ್ಷ ಎಂದು ಕರೆದ ಪ್ರಧಾನಿ ಮೋದಿ, 2014 ಕೇವಲ ವರ್ಷವಲ್ಲ, ಇದು ಬದಲಾವಣೆ ಎಂದರು. ಔಟ್ ಡೇಟೆಡ್ ಫೋನ್ ಗಳ ಸ್ಕ್ರೀನ್ ಕಾರ್ಯನಿರ್ವಹಿಸುವುದಿಲ್ಲ, ಅದೇ ರೀತಿ ಹಿಂದಿನ (ಕಾಂಗ್ರೆಸ್) ಸರ್ಕಾರ ಕೂಡಾ ಕೆಟ್ಟು ಹೋದ ಸ್ಥಿತಿಯಲ್ಲಿತ್ತು ಎಂದು ಪ್ರಧಾನಿ ಮೋದಿ ಟೀಕಿಸಿದರು.
ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪಲ್ ಸೇರಿದಂತೆ ಗೂಗಲ್ ನಂತಹ ದೈತ್ಯ ಟೆಕ್ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳ ಕಾರ್ಖಾನೆ ತೆರೆಯಲು ಸಾಲಾಗಿ ನಿಂತಿರುವ ಅಂಕಿಅಂಶ ನೀಡಿದರು. ಇತ್ತೀಚೆಗಷ್ಟೇ ಗೂಗಲ್ ಕೂಡಾ ಭಾರತದಲ್ಲಿ ಫಿಕ್ಸೆಲ್ ಫೋನ್ ಉತ್ಪಾದಿಸುವುದಾಗಿ ಘೋಷಿಸಿತ್ತು. ಸ್ಯಾಮ್ ಸಂಗ್ ಫೋಲ್ಡ್ 5, ಆಪಲ್ ಐಫೋನ್ 15 ಭಾರತದಲ್ಲಿ ಉತ್ಪಾದನೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಡೀ ಜಗತ್ತು ಮೇಡ್ ಇನ್ ಇಂಡಿಯಾ ಫೋನ್ ಗಳನ್ನು ಬಳಸುವಂತೆ ಹೇಳುತ್ತಿವೆ. ನಾವು ದೇಶದಲ್ಲಿ ಕೇವಲ 5ಜಿ ಅನ್ನು ಮಾತ್ರ ವಿಸ್ತರಿಸುತ್ತಿಲ್ಲ, 6ಜಿ ಟೆಕ್ನಾಲಜಿಯತ್ತ ನಾವೀಗ ದೊಡ್ಡ ಹೆಜ್ಜೆಯನ್ನು ಇಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.