Advertisement

ಅನ್ನ-ಶಿಕ್ಷಣ-ಮನೆ ಕೊಟ್ಟವರನ್ನು ಜನ ಮರೆಯಲ್ಲ

02:54 PM Jan 06, 2018 | Team Udayavani |

ಚಿಕ್ಕಮಗಳೂರು: ಅನ್ನ, ಮನೆ, ಶಿಕ್ಷಣ, ಹಾಲು ಕೊಟ್ಟವರನ್ನು ರಾಜ್ಯದ ಜನ ಎಂದಿಗೂ ಮರೆಯುವುದಿಲ್ಲ. ಮುಂದೆಯೂ ನಮ್ಮ ಸರ್ಕಾರವೇ ಆಡಳಿತಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮೂಡಿಗೆರೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸಾಧನಾ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮದು ಬಸವಣ್ಣ, ಕನಕದಾಸರು, ಸಂತ ಶಿಶುನಾಳ ಶರೀಫರು, ಸೂಫಿಗಳ ನಾಡು. ಇಲ್ಲಿ ಯಾವುದೇ ತಂತ್ರ, ಮಂತ್ರ, ಜಾದು ನಡೆಯಲ್ಲ. ನಮ್ಮ ರಾಜ್ಯದ ಜನರಿಗೆ ನಮ್ಮ ಸರ್ಕಾರ ಉಚಿತ, ಅಕ್ಕಿ, ಮನೆ, ಶಿಕ್ಷಣ, ಉಚಿತ ಹಾಲು ಕೊಟ್ಟಿದೆಯಲ್ಲದೆ, ರೈತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗೂ ದಲಿತರ ಸಾಲ ಮನ್ನಾ ಮಾಡಿದೆ. ನಮ್ಮ ರಾಜ್ಯದ ಜನ ಇದನ್ನು ಯಾವ ಕಾರಣಕ್ಕೂ ಮರೆಯಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು ನಾಲ್ಕೂವರೆ ವರ್ಷ ಪೂರ್ಣಗೊಂಡಿದೆ. ಚುನಾವಣಾ ಪೂರ್ವದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ 165 ಭರವಸೆ ಕೊಟ್ಟಿದ್ದೆವು. ಅವುಗಳಲ್ಲಿ ಈಗಾಗಲೆ 155 ಭರವಸೆಗಳನ್ನು ಈಡೇರಿಸಲಾಗಿದೆ. ಫೆ.14 ರಂದು ಬಜೆಟ್‌ ಮಂಡಿಸಲಿದ್ದೇನೆ. ನಾನು ಬಜೆಟ್‌ ಸಿದ್ಧಪಡಿಸುವ ಸಂದರ್ಭದಲ್ಲಿ ತಮ್ಮ ಕಣ್ಣಿಗೆ ಕಾಣುವುದು ಬಡ ಜನತೆ. ಇವರಿಗೆ ಏನೆಲ್ಲ ಭರವಸೆ ಕೊಟ್ಟಿದ್ದೇನೆ. ಅದರಲ್ಲಿ ಯಾವುದು ಉಳಿದಿದೆ ಎಂಬುದಷ್ಟೆ  ಹೇಳಿ ಎಂದು ಹೇಳಿದರು.

ಕೆಲವರು ಸಾಧನಾ ಸಮಾವೇಶ ಬಗ್ಗೆ ಟೀಕಿಸುತ್ತಾರೆ. ಸರ್ಕಾರಿ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ದೇವರು. ಅವರಿಗಾಗಿ ಸರ್ಕಾರ ಏನು ಮಾಡಿದೆ ಎಂಬುದನ್ನು ಅವರಿಗೆ ತಿಳಿಸಬೇಕಾದುದು ನಮ್ಮ ಕರ್ತವ್ಯ. ಸರ್ಕಾರ ಮಾಡಿರುವ ಕೆಲಸವನ್ನು  ಜನರಿಗೆ ತಿಳಿಸುವ ಕಾರ್ಯಕ್ರಮವನ್ನು ಸರ್ಕಾರದ ಹಣದಲ್ಲಿ ಮಾಡದೆ ಬೇರಾವ ಹಣದಲ್ಲಿ ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಇಲ್ಲ ತಾರತಮ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಕ್ಕೆ ಬಂದವರು ಜಾತಿ, ಧರ್ಮ ಎಂದು ಪರಿಗಣಿಸದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲರೂ ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಅದೇ ರೀತಿ ನಡೆದುಕೊಂಡಿದೆ. ಅಭಿವೃದ್ಧಿ ವಿಚಾರದಲ್ಲಿ ಎಂದೂ ತಾರತಮ್ಯ ಮಾಡಿಲ್ಲ. ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಕೇವಲ ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಿಗೆ ಮಾತ್ರ ಹೋಗುತ್ತಿಲ್ಲ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುವುದಾಗಿ ಹೇಳಿದರು.

Advertisement

ಕೇರಳ ಮಾದರಿಯಲ್ಲಿ ಲೀಸ್‌: ಈ ಭಾಗದಲ್ಲಿ ಅರಣ್ಯ ಒತ್ತುವರಿ ವಿಚಾರ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಬಲವಂತವಾಗಿ ತೆರವುಗೊಳಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇ ಆಗುವವರೆಗೂ ಒತ್ತುವರಿ ತೆರವುಗೊಳಿಸದಂತೆ ಈಗಾಗಲೆ ಸೂಚಿಸಲಾಗಿದೆ. ಕೇರಳದಲ್ಲಿ ಒತ್ತುವರಿ ಪ್ರದೇಶವನ್ನು ಲೀಸ್‌ ಮಾದರಿಯಲ್ಲಿ ಬೆಳೆಗಾರರಿಗೆ ನೀಡಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲೂ ಕೊಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳಸವನ್ನು ತಾಲೂಕು ಕೇಂದ್ರವಾಗಿಸಬೇಕೆಂಬ ಬೇಡಿಕೆ ಈಗ ಎಲ್ಲ ಪಕ್ಷಗಳಿಂದ ಬರುತ್ತಿದೆ. ಈಗಾಗಲೆ ಸಮಿತಿಯ ವರದಿಯನ್ವಯ ಹೊಸ ತಾಲೂಕುಗಳನ್ನು ಘೋಷಿಸಿ ಆಗಿದೆ. ಕಳಸವನ್ನು ತಾಲೂಕು ಕೇಂದ್ರವಾಗಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next