ದಾಂಡೇಲಿ: ಮೊಸಳೆಗಳಿಂದಾಗಬಹುದಾದ ದಾಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಪ್ರಮುಖ ನದಿ ತೀರದ ಹತ್ತಿರ ತಡೆ ಬೇಲಿಯನ್ನು ನಿರ್ಮಿಸಿದೆ.
ಈಗಾಗಲೇ ಕಳೆದ ಎರಡ್ಮೂರು ವರ್ಷಗಳಿಂದ ಮೊಸಳೆ ದಾಳಿಗೆ ಒಟ್ಟು ಐವರು ಬಲಿಯಾಗಿದ್ದು, ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜನರು ನದಿಗೆ ಇಳಿಯದಂತೆ ಅರಣ್ಯ ಇಲಾಖೆ ತಡೆ ಬೇಲಿಯನ್ನು ನಿರ್ಮಿಸಿದೆ.
ಮೊಸಳೆಗಳಿವೆ ನದಿಗೆ ಇಳಿಯಬೇಡಿ ಎಂದು ಸಾಕಷ್ಟು ಬಾರಿ ಅರಣ್ಯ ಇಲಾಖೆ, ತಾಲ್ಲೂಕಾಡಳಿತ ಮತ್ತು ನಗರಾಡಳಿತ ಜನ ಜಾಗೃತಿಯನ್ನು ಮೂಡಿಸುತ್ತಲೇ ಬಂದಿದೆ.
ಇನ್ನೂ ಅರಣ್ಯ ಇಲಾಖೆಯವರು ಹಳೆ ದಾಂಡೇಲಿಯ ಸೇತುವೆ ಮತ್ತು ಕುಳಗಿ ರಸ್ತೆಯ ಸೇತುವೆಯ ಹತ್ತಿರ ಧ್ವನಿವರ್ಧಕದ ಮೂಲಕ ನದಿಗಿಳಿಯದಂತೆ ಎಚ್ಚರಿಕೆಯ ಜಾಗೃತಿಯನ್ನು ಕಳೆದ ಒಂದು ವರ್ಷದಿಂದ ಮಾಡುತ್ತಾ ಬಂದಿದೆ.
ಆದಾಗ್ಯೂ ಜನರು ನದಿಗಳಿಯುತ್ತಿರುವುದನ್ನು ಮುಂದುವರಿಸಿದ್ದಾರೆ.
ಅಂದಹಾಗೆ ಬುಧವಾರ ನಗರದ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ತಡೆ ಬೇಲಿಯನ್ನು ದಾಟಿ ಕಾಳಿ ನದಿಗಿಳಿದು ಮಹಿಳೆಯೋರ್ವರು ಬಟ್ಟೆ ಒಗೆಯುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆಯನ್ನು ನೀಡಿದ್ದಾರೆ.