ಕೆಂಗೇರಿ: “ಬೆಂಗಳೂರು ನಗರದಲ್ಲಿ ಯಾವುದೇ ಅಪರಾಧಗಳು ಜರುಗಿದರೂ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯ ಮೇಲೆ ಹೆಚ್ಚಿನ ಒತ್ತಡದ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೆಚ್ಚಿದೆ,’ ಎಂದು ಬೆಂಗಳೂರು ನಗರ ಪೊಲೀಸ್ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಮ್.ಎನ್.ಅನುಚೇತ್ ತಿಳಿಸಿದರು.
ಕೆಂಗೇರಿಯ ಕೃಷ್ಣಪ್ರಿಯಾ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ನಗರ ಪೊಲೀಸ್ ಪಶ್ಚಿಮ ವಿಭಾಗದಿಂದ ಆಯೋಜಿಸಿದ್ದ ಸುಧಾರಿತ ಪೊಲೀಸ್ ಬೀಟ್ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು “ಬೀಟ್ ಸದಸ್ಯರ ಜವಾಬ್ದಾರಿಯುತ ಕಾರ್ಯನಿರ್ವಹಣೆಯಿಂದ ಅಪರಾಧಗಳನ್ನು ತಡೆಗಟ್ಟಬಹುದು. ಬೀಟ್ ಸದಸ್ಯರು ಕ್ರಿಯಾಶೀಲರಾಗಿ ಯಾವುದೇ ಮಾಹಿತಿ ಇದ್ದರೂ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು,’ ಎಂದು ಮನವಿ ಮಾಡಿದರು.
ಕೆಂಗೇರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಿ.ವೈ.ಗಿರಿರಾಜ್ ಮಾತನಾಡಿ, “ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ಬೀಟ್ ವ್ಯವಸ್ಥೆ ಮಾಡಲಾಗಿದೆ. ಒಂದು ಬೀಟ್‌ಗೆ ಒಬ್ಬ ಪೇದೆ ಹಾಗೂ 30 ಜನ ನಾಗರಿಕರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ವ್ಯವಸೆ ಬಲಪಡಿಸಲಾಗುತ್ತಿದೆ. ಠಾಣಾ ವ್ಯಾಪ್ತಿಯಲ್ಲಿ ಒಟ್ಟು 600 ಜನ ನಾಗರಿಕರನ್ನು ಬೀಟ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು,’ ಎಂದು ತಿಳಿಸಿದರು.
ಕೆಂಗೇರಿ ಪುರಸಭೆಯ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು ಮಾತನಾಡಿ “ಗಾಂಜಾ ಮತ್ತು ಡ್ರಗ್ಸ್ ಮಾಫಿಯಾ ಉಲ್ಲಾಳು ವಾರ್ಡ್‌ನಲ್ಲಿ ಚಟುವಟಿಕೆ ನಡೆಸುತ್ತಿದೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸ್ವಾಸ್ಥ ಸಮಾಜ ನಿರ್ಮಾಣ ಮಾಡಬೇಕು,’ ಎಂದು ಮನವಿ ಮಾಡಿದರು. ವಿವಿಧ ಬಡಾವಣೆಗಳಿಂದ ಬಂದಿದ್ದ ನಾಗರಿಕರು, ವ್ಹೀಲಿಂಗ್, ಸರಗಳ್ಳತನ, ಗಾಂಜಾ, ಮಾದಕವಸ್ತು ಮಾಫಿಯಾ, ಪಾದಚಾರಿ ಮಾರ್ಗ ಒತ್ತುವರಿ ಕುರಿತು ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರು.
ಕೆಂಗೇರಿ ಗೇಟ್ ಉಪ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಎಸ್.ಪ್ರಕಾಶ್, ಬ್ಯಾಟರಾಯನಪುರ ಸಂಚಾರ ವಿಭಾಗದ ಪೊಲೀಸ್ ವೃತ್ತ ನಿರೀಕ್ಷಕ ಬಾಲಕೃಷ್ಣ ರಾಜ್, ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್, ವಿ.ವಿ.ಸತ್ಯನಾರಾಯಣ ಮತ್ತಿತರರು ಸಭೆಯಲ್ಲಿದ್ದರು.