Advertisement

ಉದ್ಯಾನ ವೀಕ್ಷಣೆಗೆ ಬಂದ ಜನಸಾಗರ

11:24 AM Jun 18, 2018 | |

ಆಲಮಟ್ಟಿ: ಜೀವನದ ಜಂಜಾಟದಲ್ಲಿ ಒಮ್ಮೆಯಾದರೂ ಪ್ರವಾಸಿ ತಾಣ ಸಸ್ಯಕಾಶಿ ಆಲಮಟ್ಟಿಯನ್ನು ನೋಡಿ ಕಣ್ತುಂಬಿಕೊಳ್ಳಬೇಕು ಎಂದು ನಿತ್ಯ ಸಾವಿರಾರು ಜನ ಆಲಮಟ್ಟಿಗೆ ಆಗಮಿಸುತ್ತಾರೆ. ರಂಜಾನ್‌ ಆಚರಿಸಿದ ಮುಸ್ಲಿಂ ಬಾಂಧವರು ಶನಿವಾರ ಮಧ್ಯಾಹ್ನದಿಂದ ಪಟ್ಟಣದ ವಿವಿಧ ಉದ್ಯಾನ ವೀಕ್ಷಿಸಲು ಆಗಮಿಸಿದ್ದು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನ ಬಂದಿದ್ದು ವಿಶೇಷವಾಗಿತ್ತು.

Advertisement

ರಂಜಾನ್‌ ಹಬ್ಬ ಆಚರಿಸಿದ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ಮುಸ್ಲಿಂ ಬಾಂಧವರು ಪಟ್ಟಣಕ್ಕೆ ಆಗಮಿಸಿ ವಿವಿಧ ಉದ್ಯಾನಗಳನ್ನು ವೀಕ್ಷಿಸಿ ಕಣ್ಮನ ತುಂಬಿಕೊಂಡರು. ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಸಾವಿರಾರು ಮಹಿಳೆಯರು, ಮಕ್ಕಳು, ವಯೋವೃದ್ಧರು, ಯುವಕರೆನ್ನದೇ ಎಲ್ಲ ವಯೋಮಾನದವರೂ ಆಗಮಿಸಿ ಇಲ್ಲಿಯ ರಾಕ್‌ ಉದ್ಯಾನ, ಲವ-ಕುಶ ಉದ್ಯಾನ, ಗೋಪಾಲ ಕೃಷ್ಣ ಉದ್ಯಾನ ವೀಕ್ಷಿಸಿ ಸಂಜೆ ಸಂಗೀತ ನೃತ್ಯ ಕಾರಂಜಿ ನೋಡಿದರು.

ವಿಜಯಪುರ, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ ಹಾಗೂ ಸೊಲ್ಲಾಪುರ ಸೇರಿದಂತೆ ವಿವಿಧ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಂದ ಪ್ರವಾಸಿಗರು ಆಟೋ, ಕಾರು, ರೈಲು, ಬಸ್‌, ಲಾರಿ, ದ್ವಿಚಕ್ರ ವಾಹನಗಳ ಮೂಲಕ
ಆಗಮಿಸುತ್ತಿರುವುದು ಕಂಡು ಬಂತು.

ರಾಕ್‌ ಉದ್ಯಾನದ ವಿವಿಧ ಮರಗಳ ಕೆಳಗೆ ಸೇರಿದ್ದ ಸಾವಿರಾರು ಸಂಖ್ಯೆ ಪ್ರವಾಸಿಗರು ತಾವು ಕಟ್ಟಿಕೊಂಡು
ತಂದಿರುವ ಸಿಹಿ ಭೋಜನ ಸವಿಯುತ್ತಿರುವುದು ಎಲ್ಲೆಡೆ ಕಂಡು ಬಂತು. ರಾಕ್‌ ಉದ್ಯಾನವನದ ಪ್ರವೇಶ ದ್ವಾರದಲ್ಲಿ ಟಿಕೇಟ್‌ ಪಡೆಯಲು ಜನರ ಸರದಿ ಸಾಲು ಅತಿ ಉದ್ದವಾಗಿತ್ತು. ಮಧ್ಯಾಹ್ನದ ನಂತರ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗಿರುವುದರಿಂದ ಪ್ರವಾಸಿಗರು ಟಿಕೆಟ್‌ ಪಡೆಯಲು ಹರಸಾಹಸ ಮಾಡುತ್ತಿದ್ದರು.

ಬಿರಿಯಾನಿ ಬಲು ಜೋರು: ಪಟ್ಟಣದ ವಿವಿಧ ಉದ್ಯಾನಗಳನ್ನು ವೀಕ್ಷಿಸಲು ವಿವಿಧ ಮೂಲೆಗಳಿಂದ ಆಗಮಿಸಿದ್ದ ಮುಸ್ಲಿಂ ಬಾಂಧವರ ವಿಶೇಷ ಖಾದ್ಯವಾದ ಬಿರಿಯಾನಿ ಅನ್ನದ ಅಂಗಡಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತೆರೆದಿದ್ದು ಜನ ಜನದಟ್ಟಣೆ ಹೆಚ್ಚಾಗಿತ್ತು. ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಾಗಿತ್ತು, ಸಹಜವಾಗಿ ಪ್ರವಾಸಿಗರು ತಮಗೆ ಬೇಕಾದ ಸಾಮಗ್ರಿ ಖರೀದಿಸುತ್ತಿರುವುದರಿಂದ ಹುಡುಗರ ಆಟಿಕೆ ಸಾಮಾನು, ಕುರುಕಲು ತಿಂಡಿ, ಐಸ್‌ಕ್ರೀಂ, ಹಣ್ಣಿನ ವ್ಯಾಪಾರ, ಹಣ್ಣಿನ ಜ್ಯೂಸ್‌, ಕಬ್ಬಿನ ರಸ, ಫೋಟೋ ತೆಗೆಯಿಸಿಕೊಳ್ಳುವವರು, ಆಲಮಟ್ಟಿ ಜಲಾಶಯ ಹಾಗೂ ಉದ್ಯಾನವನಗಳ, ವಿಜಯಪುರದ ಗತವೈಭವ ಸಾರುವ ಫೋಟೋಗಳನ್ನು ಖರೀದಿಸಿ ಹಾಗೂ ನೀರಿನ ಬಾಟಲಿ ವ್ಯಾಪಾರ ಜೋರಾಗಿತ್ತು ಎನ್ನುತ್ತಾರೆ ಮಂಜುನಾಥ ಹಿರೇಮಠ ಹಾಗೂ ಅಂದಾನಿ ತೋಳಮಟ್ಟಿ.

Advertisement

ಜನದಟ್ಟಣೆ: ವಿವಿಧ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಉದ್ಯಾನ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರಿಂದ ರವಿವಾರ ರಾಕ್‌ ಉದ್ಯಾನದಿಂದ 1,25,130 ರೂ., ಗೋಪಾಲಕೃಷ್ಣ ಉದ್ಯಾನದಿಂದ 25,150 ರೂ., ಲವಕುಶ ಉದ್ಯಾನದಿಂದ 18,010 ರೂ. ಸೇರಿದಂತೆ ಒಟ್ಟು 1,68,290 ರೂ. ಕೆಬಿಜೆಎನ್‌ ಎಲ್‌ಗೆ ಜಮಾ ಆಗಿದೆ. 

ಪ್ರತಿ ಸಲದಂತೆ ಈ ಬಾರಿಯೂ ಜನ ಹೆಚ್ಚು ಆಗಮಿಸುತ್ತಿದ್ದಾರೆ ಅವರ ಮೂಲಭೂತ ಸೌಕರ್ಯಗಳಿಗಾಗಿ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರವಾಸಿಗರಿಗೆ ಮಾಹಿತಿ ಹಾಗೂ ಉದ್ಯಾನಗಳ ರಕ್ಷಣೆಗಾಗಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಹಾಗೂ ನಾಲ್ವರು ಅರಣ್ಯಾಧಿಕಾರಿಗಳು, 10 ಸಿಬ್ಬಂದಿ ಹಾಗೂ 50 ದಿನಗೂಲಿ ನೌಕರರು ಸೇರಿದಂತೆ 65 ಜನರನ್ನು ರಾಕ್‌ ಉದ್ಯಾನಕ್ಕೆ ಅರಣ್ಯ ಇಲಾಖೆಯಿಂದ  ನಿಯುಕ್ತಿಗೊಳಿಸಲಾಗಿತ್ತು.

ಬಸವನಬಾಗೇವಾಡಿ ಸಿಪಿಐ ಕರುಣೇಶಗೌಡ ನೇತೃತ್ವದಲ್ಲಿ ಆಲಮಟ್ಟಿ, ನಿಡಗುಂದಿ, ಮನಗೂಳಿ, ಕೊಲ್ಹಾರ, ಬಸವನಬಾಗೇವಾಡಿ ಠಾಣೆಗಳ ಒಟ್ಟು 6 ಪಿಎಸ್‌ಐ, 6 ಎಎಸ್‌ಐ ಹಾಗೂ 45 ಪೊಲೀಸ್‌ ಸಿಬ್ಬಂದಿ ಮತ್ತು 2 ಡಿಎಆರ್‌ ತುಕಡಿ, ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ನಾಲ್ವರು ಪಿಎಸೈ, 55 ಪೊಲೀಸ್‌ ಸಿಬ್ಬಂದಿ ಸೇರಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ.

Advertisement

Udayavani is now on Telegram. Click here to join our channel and stay updated with the latest news.

Next