ಹಾವೇರಿ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಮೇ 10ರಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರವಿವಾರ ಸಾರ್ವಜನಿಕರು ದಿನಸಿ ಅಂಗಡಿಗಳಲ್ಲಿ ಮುಗಿಬಿದ್ದು ಅಗತ್ಯ ವಸ್ತು ಖರೀದಿಸಿದರು. ಇದರಿಂದ ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಹಾಗೂ ಜನಸಂದಣಿ ಹೆಚ್ಚಾಗಿ ಕಂಡು ಬಂತು.
ಕೊರೊನಾ ನಿಯಂತ್ರಣಕ್ಕೆ ಇಷ್ಟು ದಿನ ವಿಧಿಸಿದ್ದ ಜನತಾ ಕರ್ಫ್ಯೂ ಅಷ್ಟಾಗಿ ಪರಿಣಾಮ ಬೀರದ ಹಿನ್ನೆಲೆ ಸರ್ಕಾರ ಸೋಮವಾರದಿಂದ ಕಟ್ಟುನಿಟ್ಟಾಗಿ ಲಾಕ್‌ಡೌನ್ ಅನುಷ್ಠಾನಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಡಗಡೆ ಬಂದರೆ ಪೊಲೀಸರ ಲಾಠಿ ರುಚಿ ನೋಡಬೇಕಾಗುತ್ತದೆ ಎಂಬ ಆತಂಕದಲ್ಲಿ ತಿಂಗಳುಗಟ್ಟಲೇ ಆಗುವಷ್ಟು ಅಗತ್ಯ ದಿನಸಿ ಸಾಮಗ್ರಿ ಖರೀದಿಸಲು ಮುಗಿಬಿದ್ದಿದ್ದು ಕಂಡು ಬಂತು.
ನಗರದ ಎಂ.ಜಿ. ರಸ್ತೆಯಲ್ಲಿರುವ ಬಹತೇಕ ದಿನಸಿ ಅಂಗಡಿಗಳು ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತು ಕಾಳು-ಕಡಿ, ದಿನಬಳಕೆ ಸಾಮಗ್ರಿ ಖರೀದಿಸಿದರು. ಇನ್ನು ನಗರದ ಸೂಪರ್ ಮಾರ್ಕೆಟ್‌ಗಳಲ್ಲಿ ಸಹ ಇದೇ ಪರಿಸ್ಥಿತಿ ಕಂಡು ಬಂತು. ಲಾಕ್‌ಡೌನ್ ಮಾಡಿದರೆ ಮುಂದಿನ ದಿನಗಳಲ್ಲಿ ಏನು ಸಿಗುತ್ತೋ, ಏನು ಸಿಗುವುದಿಲ್ಲವೋ ಎಂಬ ಆತಂಕದಿಂದ ಸಾರ್ವಜನಿಕರು ಬೆಳಗ್ಗೆಯೇ ಮಾರುಕಟ್ಟೆಗೆ ಧಾವಿಸಿ ಅಗತ್ಯವಿರುವುದು, ಇಲ್ಲದ್ದು ಸೇರಿದಂತೆ ಸಾಮಗ್ರಿಗಳನ್ನು ಖರೀದಿಸಿ ಸಮಾಧಾನದ ನಿಟ್ಟುಸಿರು ಬಿಟ್ಟರು.
ಸಾಮಾಜಿಕ ಅಂತರವಿಲ್ಲ: ಕೊರೊನಾ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಜಾಗೃತಿ ಮೂಡಿಸಿದರೂ ಯಾರೊಬ್ಬರು ಕೂಡ ಈ ನಿಯಮ ಪಾಲಿಸಲು ಮುಂದಾಗುತ್ತಿಲ್ಲ. ನಗರ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ನಿಯಮ ಪಾಲಿಸದೇ ವಿವಿಧ ಅಂಗಡಿಗಳ ಮುಂದೆ ಮುಗಿಬಿದ್ದು ಜನರು ಸಾಮಗ್ರಿ ಖರೀದಿಸಿದರು. ಮೇ 10ರಿಂದ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ದಿನಸಿ ಖರೀದಿಗೆ ಅವಕಾಶ ಇದೆ ಎಂದು ಹೇಳಿದರೂ ಅನೇಕರು ಆತಂಕದಲ್ಲಿಯೇ ದಿನಸಿ ಸಾಮಗ್ರಿ ಖರೀದಿಸಿದರು.
ಮದುವೆ ಸಿದ್ಧತೆಗೆ ಪರದಾಟ: ಈಗಾಗಲೇ ಮದುವೆ ನಿಗದಿ ಮಾಡಿಕೊಂಡವರು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಉದ್ದುದ್ದ ಪಟ್ಟಿ ಹಿಡಿದುಕೊಂಡು ಗಂಟೆಗಟ್ಟಲೇ ಅಂಗಡಿಗಳ ಮುಂದೆ ಕಾದು ದಿನಸಿ ಸಾಮಗ್ರಿ ಖರೀದಿಸಿದರು. ಅಂಗಡಿಗಳ ಬಾಗಿಲು ತೆರೆಯುವ ಮೊದಲೇ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ಕಾದು ಕುಳಿತಿದ್ದರು. ಅಂಗಡಿಗಳ ಬಾಗಿಲು ತೆರೆಯುತ್ತಿದ್ದಂತೆ ತಮಗೆ ಬೇಕಾದ ದಿನಸಿ ಸಾಮಗ್ರಿ, ಬುಟ್ಟಿ, ಪೂಜಾ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು. ಮದುವೆಗಳ ನಿಗದಿ ಮಾಡಿಕೊಂಡಿರುವ ಹಿನ್ನೆಲೆ ಗ್ರಾಮೀಣ ಭಾಗಗಳಿಂದ ನಗರಗಳಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿತ್ತು. ಅಲ್ಲದೇ ನಗರ ಮಾರುಕಟ್ಟೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದರಿಂದ ಬೆಳಗ್ಗೆ ಕೆಲಹೊತ್ತು ಸಂಚಾರಕ್ಕೆ ತೊಂದರೆ ಉಂಟಾಯಿತು.