ಬೆಂಗಳೂರು: ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದೆ. ಕೋರ್ಟ್ ಆದೇಶ ಸ್ವಾಗತಾರ್ಹ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನ 14 ಹಾಗೂ ಜೆಡಿಎಸ್‌ನ ಮೂರು ಶಾಸಕರು ರಾಜೀನಾಮೆ ಕೊಟ್ಟಿದ್ದರು.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನಾವು ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡಿದ್ದೆವು. ಸ್ಪೀಕರ್ ಅವರನ್ನು ಅನರ್ಹ ಮಾಡಿ, ನಿರ್ದಿಷ್ಟ ಅವಧಿಯವರೆಗೆ ಚುನಾವಣೆಗೆ ನಿಲ್ಲಬಾರದು ಎಂದು ಆದೇಶಿಸಿದ್ದರು. ಅನರ್ಹತೆಯನ್ನು ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೇಳಿರುವುದನ್ನು ತಳ್ಳಿ ಹಾಕಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಶಾಸಕರು ರಾಜೀನಾಮೆ ನೀಡಲು ಅವಕಾಶ ಇದೆ. ಆದರೆ, ಅದು ಸ್ವಯಂಪ್ರೇರಿತ ಹಾಗೂ ನೈಜತೆಯಿಂದ ಕೂಡಿರಬೇಕು. ಇಲ್ಲದಿದ್ದರೆ ರಾಜೀನಾಮೆ ಒಪ್ಪಿಕೊಳ್ಳಲಾಗದು. ಸುಪ್ರೀಂ ಕೋರ್ಟ್ ಆಯ್ಕೆಯಾಗಿರುವ ಶಾಸಕರು ಪಕ್ಷಾಂತರ ಮಾಡುವ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದೆ. ಸ್ಪೀಕರ್ ಆದೇಶವನ್ನು ಕೋರ್ಟ್ ಒಪ್ಪಿದೆ. ಇದು ಪಕ್ಷಾಂತರಿಗಳಿಗೆ ದೊಡ್ಡ ಪಾಠ.
ಪಕ್ಷಾಂತರವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿಲ್ಲ. ನಾನು ಅವರನ್ನು ಸೋಲಿಸುತ್ತೇನೆ ಎಂದು ಹೇಳುವುದಿಲ್ಲ. ಜನರೇ ಅವರನ್ನು ಸೋಲಿಸುತ್ತಾರೆ ಎಂದರು. ಇದೇ ವೇಳೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬಿಜೆಪಿ ಆಡಳಿತ ಪಕ್ಷದಲ್ಲಿದ್ದಾಗೊಂದು ಪ್ರತಿಪಕ್ಷದಲ್ಲಿದ್ದಾಗೊಂದು ರೀತಿ ಮಾಡುತ್ತಾರೆ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ ಎಂದು ಹೇಳಿದರು.
ರಮೇಶ್ ಕುಮಾರ್ ಅವರ ಆದೇಶ ಇನ್ನು ಮುಂದೆ ಈ ದೇಶದ ಕಾನೂನಾಗಿ ಪರಿಗಣಿಸಲ್ಪಡುತ್ತದೆ. ಸುಪ್ರೀಂ ಕೋರ್ಟ್ ನೈತಿಕತೆಯನ್ನು ಪ್ರಶ್ನಿಸಿದೆ. ಇದಕ್ಕೆ ಜನರು ತೀರ್ಪು ನೀಡುತ್ತಾರೆ. ಈ ತೀರ್ಪು ಗಮನಿಸಿದರೆ ಸಂವಿಧಾನದ 10ನೇ ಪರಿಚ್ಚೇದ ಇನ್ನಷ್ಟು ಬಲಗೊಳ್ಳಬೇಕು ಎಂದರು.