Advertisement
ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದು ಹೇಳಿದೆ. ಈ ಸುಳ್ಳು ಮಾಹಿತಿಯನ್ನು ದೇಶದ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತೆ ನೋಡಿಕೊಂಡಿದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಕಿಡಿ ಕಾರಿದ್ದಾರೆ.
Related Articles
Advertisement
50 ಕೆಜಿ ಸಿಮೆಂಟಿನ ಚೀಲದ ಮೇಲೆ ಮೋದಿ ಸರ್ಕಾರ 90- 100 ರೂವರೆಗೆ ಜಿಎಸ್‍ಟಿ ದೋಚುತ್ತಿದೆ. ಸಿಮೆಂಟಿನ ಮೇಲೆ ಶೇ.28 ರಷ್ಟು ಜಿಎಸ್‍ಟಿ ಇದೆ. ಕಬ್ಬಿಣದ ಬೆಲೆಗಳೂ ದುಪ್ಪಟ್ಟಾಗಿವೆ. ಇದರಿಂದಾಗಿ ಮನೆಗಳ ನಿರ್ಮಾಣ ವೆಚ್ಚ ಗಗನಕ್ಕೇರಿದೆ. ಶಿಕ್ಷಣ ವೆಚ್ಚವೂ ತೀವ್ರವಾಗಿ ಏರಿಕೆಯಾಗಿದೆ. ನಿನ್ನೆ ತಾನೆ ಕರ್ನಾಟಕದ ಉಚ್ಛ ನ್ಯಾಯಾಲಯವು ಕಾಲೇಜುಗಳ ಶುಲ್ಕ ದರೋಡೆಯನ್ನು ನಿಲ್ಲಿಸಿ ಎಂಬರ್ಥದಲ್ಲಿ ಸರ್ಕಾರಕ್ಕೆ ತಾಕೀತು ಮಾಡಿದೆ. ಆದರೂ ಮೋದಿ ಸರ್ಕಾರ ಮಾತ್ರ ಬೆಲೆಗಳು ಕಡಿಮೆಯಾಗಿವೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಡಾಲರಿನ ಎದುರು ರೂಪಾಯಿಯ ಮೌಲ್ಯ ಪಾತಾಳಕ್ಕೆ ತಲುಪುತ್ತಿದೆ. ಡಾಲರಿನಲ್ಲಿ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ರೂಪಾಯಿಯ ಅಪಮೌಲ್ಯದಿಂದಾಗಿ ವಸ್ತುಗಳ ಬೆಲೆ ಶೇ. 16 ರವರೆಗೆ ಹೆಚ್ಚಾಗಿದೆ. ಇದರಿಂದಾಗಿಯೂ ಹಣದುಬ್ಬರ ಹೆಚ್ಚುತ್ತಿದೆ. ವಸ್ತುಗಳ ಬೆಲೆ ಹೆಚ್ಚಾಗುತ್ತಿವೆ. ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ಮಾಡುವುದಾಗಿ ಜನರಿಗೆ ಸುಳ್ಳು ಟೋಪಿ ಹಾಕಿ ಅಧಿಕಾರಕ್ಕೆ ಬಂದ ಮೋದಿಯವರು ಮಾಡಿದ್ದೇನು? ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯು ನಿನ್ನೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಕೋವಿಡ್ ಸಂದರ್ಭಕ್ಕಿಂತಲೂ ಅತ್ಯಂತ ಕನಿಷ್ಠ ಮಟ್ಟದಲ್ಲಿ ಭಾರತವು ಹೊರದೇಶಗಳಿಗೆ ರಫ್ತು ಮಾಡುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ದೇಶದ ರಫ್ತು ಶೇ.16.7 ರಷ್ಟು ಅಂದರೆ 2.4 ಲಕ್ಷ ಕೋಟಿಯಷ್ಟು ಕಡಿಮೆ ರಫ್ತು ಮಾಡಿದೆ. ಇದೇ ಸಂದರ್ಭದಲ್ಲಿ ಆಮದು ಪ್ರಮಾಣವು ಶೇ.6 ರಷ್ಟು ಹೆಚ್ಚಾಗಿದೆ. ಇದಕ್ಕಾಗಿ 4.58 ಲಕ್ಷ ಕೋಟಿಗಳನ್ನು ಹೆಚ್ಚು ಪಾವತಿಸುತ್ತಿದೆ. ರೂಪಾಯಿ ಅಪಮೌಲ್ಯದಿಂದಾಗಿ ಆಮದು ವಸ್ತುಗಳ ಬೆಲೆಗಳೂ ಹೆಚ್ಚುತ್ತಿವೆ. ಇದೆಲ್ಲ ಏನನ್ನು ಸೂಚಿಸುತ್ತಿದೆ? ಮೋದಿ ಸರ್ಕಾರದ ಉತ್ಪಾದನಾ ನೀತಿಗಳು, ತೆರಿಗೆ ವ್ಯವಸ್ಥೆ, ಬೆಲೆ ನೀತಿಗಳು ಜನರ ಪರವಾಗಿಲ್ಲ ಎಂಬುದನ್ನಲ್ಲವೆ? ಯಾರೊ ಕೆಲವರ ಉದ್ಧಾರಕ್ಕಾಗಿ ಮೋದಿಯವರ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆಯೇ ಹೊರತು ಎಲ್ಲರ ವಿಕಾಸಕ್ಕಲ್ಲ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆ ಅಧಃಪತನದ ಕಡೆಗೆ ಸಾಗುತ್ತಿದೆ ಎಂದು ಟೀಕಿಸಿದ್ದಾರೆ.
ತೆರಿಗೆ ಸಂಗ್ರಹ ಉತ್ತಮವಾಗಿದೆಯೆಂದು ಮೋದಿ ಸರ್ಕಾರ ಹೇಳುತ್ತಿದೆಯಲ್ಲ ಎಂದು ಕೆಲವರು ಕೇಳುತ್ತಾರೆ. 2017-18 ರಲ್ಲಿ ಜಿಎಸ್‍ಟಿ ವ್ಯವಸ್ಥೆ ಜಾರಿಗೆ ತಂದ ವರ್ಷದ ಬೆಳವಣಿಗೆ ದರದಲ್ಲಿಯೆ ತೆರಿಗೆ ದರವಿದ್ದರೆ ಈ ವರ್ಷದ ವೇಳೆಗೆ ಪ್ರತಿ ತಿಂಗಳೂ ಕನಿಷ್ಟ 2.2 ಲಕ್ಷ ಕೋಟಿ ಜಿಎಸ್‍ಟಿ ಸಂಗ್ರಹವಾಗಬೇಕಾಗಿತ್ತು. ಆದರೆ ಆಗುತ್ತಿರುವುದೇನು? ಮೊಸರು, ಮಜ್ಜಿಗೆ, ಮಂಡಕ್ಕಿ, ಅಕ್ಕಿ, ಗೋಧಿ, ಮಕ್ಕಳು ಬಳಸುವ ಪೆನ್ನು ಪೆನ್ಸಿಲ್ಲು, ಕಾಗದ, ಇಂಕು ಹಾಗೂ ಆಸ್ಪತ್ರೆ ಬಿಲ್ಲು ಹೀಗೆ ಎಲ್ಲದರ ಮೇಲೆಯೂ ತೆರಿಗೆ ವಿಧಿಸಿ ಕೊಳ್ಳೆ ಹೊಡೆಯಲಾಗುತ್ತಿದೆ. ಇಷ್ಟಾದರೂ ಜಿಎಸ್‍ಟಿ ಸಂಗ್ರಹ ಇನ್ನೂ 1.7 ಲಕ್ಷ ಕೋಟಿಗೂ ತಲುಪಿಲ್ಲ ಎಂಬ ಲೆಕ್ಕಾಚಾರವನ್ನು ಮಾಜಿ ಸಿಎಂ ತೋರಿದ್ದಾರೆ.
ದೇಶದ ಜನರು ಬಳಸುವ ಎಲ್ಲ ವಸ್ತು ಸೇವೆಗಳ ಮೇಲಿನ ಹಣದುಬ್ಬರವು ಶೇ.2 ರಿಂದ 3 ರಷ್ಟಿರಬೇಕು. ಆದರೆ ಈ ವರ್ಷದ ಸರಾಸರಿ ಹಣದುಬ್ಬರ ಶೇ.7 ಕ್ಕಿಂತಲೂ ಅಧಿಕವಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಸ್ತವಿಕ ವಸ್ತು ಮತ್ತು ಸೇವೆಗಳ ಬೆಲೆ ಹೆಚ್ಚಾದರೂ ಸಹ ಮೋದಿ ಸರ್ಕಾರ 6.77 ಕ್ಕೆ ಇಳಿದಿದೆ ಎಂದು ಸುಳ್ಳು ಹೇಳಿದೆ. ಈ 6.77 ಕೂಡ ಜನರ ಮನೆ ಹಾಳು ಮಾಡುವುದೆ ಹೊರತು ಜನರನ್ನು ಉದ್ಧಾರ ಮಾಡುವಂತಹುದಲ್ಲ ಎಂದು ಹೇಳಿದ್ದಾರೆ.
ಮೋದಿಯವರು ಚುನಾವಣಾ ಗಿಮಿಕ್ಕುಗಳನ್ನು ಬಿಟ್ಟು ದೇಶದ ಜನರಿಗೆ ವಾಸ್ತವವನ್ನು ಹೇಳಬೇಕು. ಪ್ರತಿ ವಸ್ತುಗಳ ಸಿಪಿಐ ಮತ್ತು ಡಬ್ಲ್ಯುಪಿಐ ಎಷ್ಟಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ದೇಶದ ಅಂಕಿ ಅಂಶಗಳ ಇಲಾಖೆಯು ಯುಪಿಎ ಸರ್ಕಾರದಲ್ಲಿ ಮಾಡುತ್ತಿದ್ದ ಹಾಗೆಯೆ ನಿರಂತರವಾಗಿ ಸರ್ವೆಗಳನ್ನು ಮಾಡಿ ಆಗಿಂದಾಗ್ಗೆ ವರದಿಗಳನ್ನು ಬಿಡುಗಡೆ ಮಾಡಬೇಕು. ಜನರ ಆದಾಯ, ವೆಚ್ಚ, ಖರೀದಿ ಸಾಮಥ್ರ್ಯ, ವಸ್ತುಗಳ ಬೆಲೆ ಇತ್ಯಾದಿಗಳ ಕುರಿತು ಜನರನ್ನು ಕತ್ತಲೆಯಲ್ಲಿ ಇಡಲಾಗಿದೆ. ವಾಸ್ತವಗಳನ್ನು ತಿಳಿಸದೆ ಅಂಕಿ ಅಂಶಗಳನ್ನು ತಿರುಚಿ ಸುಳ್ಳು ಹೇಳಿ ಜನರನ್ನು ಕತ್ತಲಲ್ಲಿಡುವುದು ಸರ್ವಾಧಿಕಾರದ ಲಕ್ಷಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೇಳುತ್ತಿರುವುದು ಸಂಪೂರ್ಣ ಸುಳ್ಳು ಎಂದು ಅರ್ಥವಾಗುತ್ತದೆ ಎಂದಿದ್ದಾರೆ.