ಕಲಬುರಗಿ: ಜನರು ಕೂಡ ಪೊಲೀಸರಿದ್ದಂತೆಯೇ. ಅವರು ತಮ್ಮ ಸುತ್ತಲಿನ ನಡೆಯುವ ಘಟನೆಗಳ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಸಮಾಜದಲ್ಲಿ ನಡೆಯಬಹುದಾದ ಬಹಳಷ್ಟು ಅಪರಾಧಗಳನ್ನು ತಡೆಯಬಹುದು ಎಂದು ರಾಜ್ಯ ಡಿಐಜಿ ರೂಪಕ್ ಕುಮಾರ ದತ್ತಾ ಹೇಳಿದರು.
ಸೋಮವಾರ ಹೆಚ್‌ಕೆಸಿಸಿಐ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಾನು ಅಧಿಕಾರದಲ್ಲಿ ಇರುವ ತನಕ ಜನಸೇವೆ ಮಾಡುತ್ತೇನೆ. ಜನಸೇವೆಯಿಂದ ಅದರಲ್ಲೂ ಪ್ರಾಮಾಣಿಕ ಸೇವೆಯಿಂದ ಮನಸ್ಸಿಗೆ ಸಿಗುವ ತೃಪ್ತಿಗಿಂತ ದೊಡ್ಡ ಖುಷಿ, ಆಸ್ತಿ ಮತ್ತೂಂದಿಲ್ಲ.
ಜನರು ಯಾವುದಕ್ಕೂ ಚಿಂತೆ ಮಾಡದೆ ಧೈರ್ಯವಾಗಿ, ಭದ್ರವಾಗಿ ಜೀವಿಸುವತ್ತ ದೃಷ್ಟಿ ನೆಡಬೇಕು ಎಂದರು. ಜನರು ಪೊಲೀಸರಿಗೆ ಸಹಕಾರ ನೀಡಿದರೆ ಮಾತ್ರವೇ ಕಾನೂನು ಸುವ್ಯವಸ್ಥೆ ಚೆನ್ನಾಗಿ ಕಾಪಾಡಲು ಪೊಲೀಸರಿಗೂ ನೆರವಾಗುತ್ತದೆ. ಆದರೆ, ಜನರಲ್ಲಿ ಈ ಕುರಿತು ಬಹಳ ಭಯವಿದೆ.
ಆದ್ದರಿಂದ ಪೊಲೀಸರು ಹಾಗೂ ನಾಗರಿಕರ ಮಧ್ಯೆ ಉತ್ತಮ ಸಂಬಂಧ ರೂಪುಗೊಳ್ಳುವ ನಿಟ್ಟಿನಲ್ಲಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಜನಸ್ಪಂದನ ಸಭೆ ನಡೆಸುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ ಎಂದರು. ಈಶಾನ್ಯ ವಲಯಕ್ಕೆ ಐಜಿಪಿಯಾಗಿ ಅಲೋಕ ಕುಮಾರ ಬಂದ ಬಳಿಕ ಈ ಭಾಗದಲ್ಲಿ ಒಂದಷ್ಟು ಕಾನೂನು ಸುಧಾರಣೆ ಸಾಧ್ಯವಾಗಲಿದೆ ಎನ್ನುವ ಭರವಸೆ ಬಂದಿದೆ.
ಅವರೊಬ್ಬ ಕರ್ತವ್ಯಪ್ರಜ್ಞೆ ಮತ್ತು ಕ್ರೀಯಾಶೀಲ ವ್ಯಕ್ತಿ. ಅವರ ಕಾರ್ಯನಿರ್ವಹಣೆಯಲ್ಲಿ ಈ ಭಾಗದ ಜಿಲ್ಲೆಗಳಲ್ಲಿ ಜನರಿಗೆ ಉತ್ತಮ ಭದ್ರತೆ ಹಾಗೂ ಅಪರಾಧ ಚಟುವಟಿಕೆಗೆ ಕಡಿವಾಣ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅತಿಥಿಯಾಗಿದ್ದ ಈಶಾನ್ಯ ವಲಯದ ಐಜಿಪಿ ಅಲೋಕಕುಮಾರ ಮಾತನಾಡಿ, ನಮಗೆ ಜನರು ಹಾಗೂ ಹಿರಿಯ ಅಧಿಕಾರ ವರ್ಗದಿಂದ ಉತ್ತಮ ಸಹಕಾರ, ಬೆಂಬಲ ಸಿಕ್ಕಾಗ ನಿಜಕ್ಕೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಹೆಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ ಮಾತನಾಡಿ, ರೂಪಕ್ ಕುಮಾರ ದತ್ತಾ ಅವರು ರಾಜ್ಯದ ಡಿಐಜಿ ಆದ ಮೇಲೆ ರಾಜ್ಯದಲ್ಲಿ ಅಪರಾಧ ಚಟುವಟಿಕೆಯಲ್ಲಿ ಇಳಿಕೆ ಕಂಡಿದೆ. ಅಲ್ಲದೆ, ಅವರೊಬ್ಬ ಜನಕಳಕಳಿ ಇರುವ ಅಧಿಕಾರಿ. ಅವರು ಅಧಿಕಾರದಲ್ಲಿ ಇರುವ ತನಕ ಯಾವುದೆ ತೊಂದರೆ ಇರುವುದಿಲ್ಲ.
ಈ ಭಾಗದಲ್ಲಿ ನಡೆಯುವ ಬಹುತೇಕ ಅಪರಾಧ ಚಟುವಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆ, ವ್ಯವಹಾರದಲ್ಲಿ ನಡೆಯುವ ಮೋಸ ತಡೆಯುವ ನಿಟ್ಟಿನಲ್ಲಿ ಹೈದ್ರಾಬಾದ ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗೂ ಅಭಯ ಸಿಗಲಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಶಶಿಕಾಂತ ಮಾನಕರ, ಖಜಾಂಚಿ ಮಂಜುನಾಥ ಜೇವರ್ಗಿ ಇದ್ದರು.