Advertisement
ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಇಬ್ಬರು ನಾಯಕರ ನಡುವೆ ನಡೆದ ವಾಗ್ವಾದ ಇಡೀ ಅಧಿವೇಶನದ ಮೇಲೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಸಂವಿಧಾನದ ಕುರಿತಾಗಿ ಅತ್ಯಂತ ಗುಣಾತ್ಮಕ ಮತ್ತು ಗೌರವಯುತವಾಗಿ ನಡೆಯ ಬೇಕಾದ ಚರ್ಚೆ ವೈಯಕ್ತಿಕ ಪ್ರತಿಷ್ಠೆ ಮತ್ತು ರಾಜಕೀಯ ಮೇಲಾಟಕ್ಕೆ ವೇದಿಕೆಯಾದದ್ದು ಬಹುದೊಡ್ಡ ದುರಂತ. ಹಿಂದಿನ ಅಧಿವೇಶನದಲ್ಲಿ ನಡೆದ ನಿರ್ಧಾರಗಳ ಬಗ್ಗೆ ಈ ಅಧಿವೇಶನದಲ್ಲಿ ಪ್ರಸ್ತಾಪವಾದದ್ದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಯಿತು.
Related Articles
Advertisement
ಈ ವಿಚಾರದಲ್ಲಿ ಡಾ. ಸುಧಾಕರ್ ಅವರ ವರ್ತನೆ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಭಾಧ್ಯಕ್ಷರು ತೆಗೆದುಕೊಂಡ ತೀರ್ಮಾನದ ಬಗ್ಗೆ ಮಾತನಾಡುವಾಗ ಸ್ವಲ್ಪ ಸಂಯಮದಿಂದ ವರ್ತಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಸಭಾಧ್ಯಕ್ಷ ಪೀಠದ ತೀರ್ಮಾನದ ಬಗ್ಗೆ ಈಗ ಚರ್ಚಿಸುವುದು ಸರಿಯೋ, ತಪ್ಪೋ ಎಂಬುದನ್ನು ನಿರ್ಧರಿಸುವುದು ಸಭಾಧ್ಯಕ್ಷರ ಪೀಠಕ್ಕೆ ಸೇರಿದ ಸಂಗತಿ. ದುರಂತವೆಂದರೆ ಸುಧಾಕರ್ ಮತ್ತು ರಮೇಶ್ ಕುಮಾರ್ ನಡುವೆ ವಿನಿಮಯವಾದ ಏಕವಚನ ಪದಪ್ರಯೋಗ, ಪ್ರತಿಷ್ಠೆಗಾಗಿ ವಿನಿಮಯವಾದ ವೈಯಕ್ತಿಕ ವಿಚಾರಗಳು ಸಾರ್ವಜನಿಕ ಚರ್ಚೆಯ ವಿಷಯವಾದವು.
ಅಸಂಸದೀಯ ಅಥವಾ ಅವಾಚ್ಯ ಪದಬಳಕೆ ರಮೇಶ್ ಕುಮಾರ್ ಮಾಡಿಲ್ಲ ಎಂದು ಕಾಂಗ್ರೆಸ್‌ನ ಇತರ ನಾಯಕರು ವಾದಿಸುತ್ತಿದ್ದಾರೆ. ಅಧಿವೇಶನದ ದಾಖಲೆಯಲ್ಲಿ ಸೇರಿಲ್ಲದಿರಬಹುದು. ಆದರೆ ರಮೇಶ್ ಕುಮಾರ್ ಸಭಾಧ್ಯಕ್ಷರಾಗಿ ಪೀಠಕ್ಕೆ ಘನತೆ ತಂದವರು. ಆತ್ಮಸಾಕ್ಷಿಗನುಗುಣವಾಗಿ ನಡೆಯಬೇಕೆಂದು ಪದೇ ಪದೇ ಹೇಳುತ್ತಿದ್ದವರು. ಅವಾಚ್ಯ ಪದಬಳಕೆಯಾಗಿದೆಯೋ ಇಲ್ಲವೋ ಎಂಬುದು ಅವರ ಆತ್ಮಸಾಕ್ಷಿಗೆ ತಿಳಿದಿದೆ. ರಾಜಕೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು. ಭಾವನಾತ್ಮಕ ವಿಚಾರಗಳು ಇಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ.
ಪಕ್ಷದ ಹಿರಿಯ ನಾಯಕರು ಒತ್ತಡ ಹೇರಿದ್ದರು ಆದ್ದರಿಂದ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಾಗಿ ಹೇಳುವ ರಾಜಕಾರಣಿಗಳು ಬಹಳಷ್ಟು ಮಂದಿ ಇದ್ದಾರೆ. ಆದರೆ ಅವರ ಸಾಲಿಗೆ ಮೌಲ್ಯಾಧಾರಿತ ರಾಜಕೀಯ, ಸಾಕ್ಷಿಪ್ರಜ್ಞೆಯ, ಸಂಸದೀಯ ನಡವಳಿಕೆಗಳನ್ನು ಆಗಾಗ ನೆನಪಿಸುವ ವ್ಯಕ್ತಿಗಳು ಸೇರಬಾರದು. ಅವರು ಮುಂದಿನ ತಲೆಮಾರಿಗೆ ಮಾದರಿಯಾಗಿರಬೇಕು.
ನಾಡು ಕಂಡ ಅಪ್ರತಿಮ ಸಂಸದೀಯಪಟು ಹಾಗೂ ಸಂವಿಧಾನದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ರಮೇಶ್ ಕುಮಾರ್ ಅವರು ಈ ಘಟನೆ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಬಗ್ಗೆ ಜನತಾ ಜನಾರ್ದನ ನಿರೀಕ್ಷೆಯಲ್ಲಿ ಇದ್ದಾನೆ.