Advertisement

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಜನತೆ ಉತ್ಸುಕ

12:09 PM Jan 12, 2018 | Team Udayavani |

ಮೈಸೂರು/ನಂಜನಗೂಡು: ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ನಂಜನಗೂಡಿನ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ಹಾಗೂ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿದರೆ ಕಳೆದ ಒಂದು ತಿಂಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೇನೆ, ಹೀಗಾಗಿ ಜನರ ಭಾವನೆಗಳು ಅರ್ಥವಾಗಿವೆ. ಯಾರು ಎಷ್ಟೇ ತಿಪ್ಪರಲಾಗ ಹಾಕಿದರು ಸಿದ್ದರಾಮಯ್ಯ ನಾಯಕತ್ವದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂದು ರಾಜ್ಯದ ಜನ ಉತ್ಸುಕರಾಗಿದ್ದಾರೆ ಎಂದರು.

ಮರೆಯಲಾಗಲ್ಲ: ನಂಜನಗೂಡು, ವರುಣಾ ಹಾಗೂ ತಿ.ನರಸೀಪುರ ನಮ್ಮ ಕ್ಷೇತ್ರಗಳೇ, ನಂಜನಗೂಡು ಕ್ಷೇತ್ರದ ಮತದಾರರ ಉಪಕಾರ ಮರೆಯಲಾಗಲ್ಲ. ಉಪ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಕಳಲೆ ಕೇಶವಮೂರ್ತಿ ಅವರಿಗೆ ಆರ್ಶೀವಾದ ಮಾಡಿ, ನಮ್ಮ ಮೇಲೆ ತೊಡೆತಟ್ಟಿದ್ದವರಿಗೆ ತಕ್ಕಪಾಠ ಕಲಿಸಿದ್ದೀರಿ, ಅದಕ್ಕಾಗಿ ನಾನು ಯಾವಾಗಲು ನಿಮಗೆ ಚಿರಋಣಿ ಎಂದರು.

ಕಳಲೆ ಕೇಶವಮೂರ್ತಿ ಶಾಸಕರಾಗಿ 9 ತಿಂಗಳಾಯಿತು. ಏಪ್ರಿಲ್‌ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆ ಬರುತ್ತಿದೆ. ಆದರೆ, ನಾನು ಆ ಚುನಾವಣೆಯ ಪ್ರಚಾರಕ್ಕೆ ಇಂದು ಬಂದಿಲ್ಲ. ನಂಜನಗೂಡು ಕ್ಷೇತ್ರದಲ್ಲಿ ಸುಮಾರು 400 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲು ಬಂದಿದ್ದೇನೆ ಎಂದು ಹೇಳಿದರು.

Advertisement

ಅಧಿಕಾರ ಜನ ಸೇವೆಗೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ನೀವೇ ನಮ್ಮ ಮಾಲೀಕರು. ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದೀರಿ, ಅಧಿಕಾರ ಇರುವುದು ಮಜಾ ಮಾಡಲು ಅಲ್ಲ. ಜನಸೇವೆಗಾಗಿ. ಹೀಗಾಗಿ ನಮ್ಮ ಕೈಲಾದ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದರು.

ಢೋಂಗಿಗಳಿಗೆ ಮತ ನೀಡಬೇಡಿ: ಕಾಂಗ್ರೆಸ್‌ ಪಕ್ಷ ಯಾವತ್ತೂ ಒಂದು ಧರ್ಮ, ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ. ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡು ಎಲ್ಲರಿಗೂ ಸಮಾನ ಅವಕಾಶ, ಸಮಾನ ಗೌರವ ಕೊಡುವುದು ಕಾಂಗ್ರೆಸ್‌ ಪಕ್ಷ ಮಾತ್ರ. ಬಿಜೆಪಿಯವರು ಬಾಯಲ್ಲಿ ಸಬ್‌ಕಾ ಸಾಥ್‌-ಸಬ್‌ಕಾ ವಿಕಾಸ್‌ ಎನ್ನುತ್ತಾರೆ, ಆದರೆ, ವಾಸ್ತವದಲ್ಲಿ ಅದು ಸುಳ್ಳು. ಢೋಂಗಿತನ. ಇಂತಹ ರಾಜಕೀಯ ಢೋಂಗಿಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ನಾನು ಕಾರಣ: ನಾನು ಹಣಕಾಸು ಮಂತ್ರಿಯಾಗಿ ಅನುದಾನ ಕೊಟ್ಟಿದ್ದು, ಸಚಿವ ಮಹದೇವಪ್ಪ ಆಸಕ್ತಿವಹಿಸಿದ್ದರಿಂದ ನಂಜನಗೂಡು ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಯಿತು. ಯಾರೋ ನಾನು ಮಾಡಿದ್ದು ಎಂದರೆ ಅದು ಸುಳ್ಳು ಎಂದು ಮಾಜಿ ಸಚಿವ ಶ್ರೀನಿವಾಸಪ್ರಸಾದ್‌ ಹೆಸರೇಳದೆ ಕುಟುಕಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಎಂಟು ತಿಂಗಳಾಯಿತು. ಈ ಅವಧಿಯಲ್ಲಿ ಜನತೆಗೆ ಕೊಟ್ಟಿದ್ದ ಎಲ್ಲ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲದೆ ಇನ್ನೂ ಅನೇಕ ಭರವಸೆ ಈಡೇರಿಸಿದ್ದೇವೆ. ನವ ಕರ್ನಾಟಕ ನಿರ್ಮಾಣ ನಮ್ಮ ಗುರಿ. ಕಷ್ಟಕಾಲದಲ್ಲಿ ನಮ್ಮ ಕೈಹಿಡಿದಿದ್ದೀರಿ, ಮುಂದೆಯೂ ನಮ್ಮ ಕೈ ಹಿಡಿಯಿರಿ ಎಂದು ಮನವಿ ಮಾಡಿದರು.

ಬೆಳೆಗೆ ನೀರು ಹರಿಸಲು ಮನವಿ: ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಅನೇಕ ಯೋಜನೆಗಳನ್ನು ಅವರೇ ಉದ್ಘಾಟಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ 147 ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಾಲೂಕಿನಲ್ಲಿ ಬೇಸಿಗೆ ಬೆಳೆಗೆ ನೀರು ಕೊಡಿ, ಬೀರಾÌಳು ಮತ್ತು ನುಗು ಏತ ನೀರಾವರಿ ಯೋಜನೆ ಜಾರಿ ಮಾಡಿ ಈ ಬಯಲಿನ 20 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಿ ಎಂದು ಮನವಿ ಮಾಡಿದರು.

ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಡಾ.ಗೀತಾ ಮಹದೇವಪ್ರಸಾದ್‌, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ಸತೀಶ್‌ ಜಾರಕಿಹೊಳಿ, ವಾಸು, ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಜಿಪಂ ಸದಸ್ಯರುಗಳಾದ ಲತಾ ಸಿದ್ಧಶೆಟ್ಟಿ, ದಯಾನಂದಮೂರ್ತಿ, ಪುಷ್ಪಾ ನಾಗೇಶ್‌ ರಾಜ್‌, ಡಾ.ಪುಷ್ಪ$ಅಮರನಾಥ್‌, ನಗರಸಭೆ ಅಧ್ಯಕ್ಷೆ ಪುಷ್ಪ$ಲತಾ ಕಮಲೇಶ್‌, ತಾಪಂ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ಉಪಾಧ್ಯಕ್ಷ ಆರ್‌.ಗೋವಿಂದರಾಜು, ಡಾ.ಯತೀಂದ್ರ ಸಿದ್ದರಾಮಯ್ಯ, ಸುನೀಲ್‌ ಬೋಸ್‌ ಸೇರಿದಂತೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next