Advertisement

ನಟ ಪ್ರಕಾಶ ರೈಗೆ ಜನ ಈಗಾಗಲೇ ಉಗಿದು ಕಳಿಸಿದ್ದಾರೆ: ಸಚಿವ ಸಿ.ಟಿ ರವಿ ಕಿಡಿ

09:49 AM Oct 05, 2019 | mahesh |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡದಿದ್ದಕ್ಕೆ ಜನ ಬಿಜೆಪಿ ಸಂಸದರನ್ನು ಉಗಿಯುತ್ತಿದ್ದಾರೆಂಬ ನಟ ಪ್ರಕಾಶ್ ರೈ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ ಈಗಾಗಲೇ ಪ್ರಕಾಶ್ ರೈರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಜನ ಚೆನ್ನಾಗಿ ಉಗಿದು ಕಳಿಸಿದ್ದಾರೆಂದು ಟೀಕಿಸಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಅವರ ಚಲನಚಿತ್ರ ಯೋಗ್ಯತೆ ಬಗ್ಗೆ ಮಾತನಾಡಲ್ಲ. ಆದರೆ ಅವರ ರಾಜಕೀಯ ಯೋಗ್ಯತೆ ಬಗ್ಗೆ ಈಗಾಗೇ ಜನ ಸರ್ಟಿಪಿಕೇಟ್ ಕೊಟ್ಟಿದ್ದಾರೆಂದು ಗೇಲಿ ಮಾಡಿದರು. ನಮ್ಮ ಪಕ್ಷದ ರಾಜಕೀಯ ಯೋಗ್ಯತೆಗೆ ಜನ ನಮಗೂ ಸರ್ಟಿಫಿಕೇಟ್ ಕೊಟ್ಟಿದ್ದಾರೆಂದರು.

ಬಿಜೆಪಿ ಒಂದು ಸೀಟನ್ನು ಗೆಲ್ಲಿಸದ ಕೇರಳಕ್ಕೆ ಪ್ರಧಾನಿ ಮೋದಿ ನೆರೆ ಸಂತ್ರಸ್ತರಿಗೆ ಸ್ಪಂದಿಸಿ ಪರಿಹಾರ ಕೊಟ್ಟಿರುವಾಗ 25 ಮಂದಿ ಸಂಸದರನ್ನು ಗಲ್ಲಿಸಿ ಕಳುಹಿಸಿರುವ ಕರ್ನಾಟಕಕ್ಕೆ ಪರಿಹಾರ ನೀಡದಿರಲು ಸಾಧ್ಯವೇ ಎಂದು ವಿರೋಧ ಪಕ್ಷಗಳನ್ನು ಸಚಿವ ಸಿ.ಟಿ.ರವಿ ಪ್ರಶ್ನಿಸಿದರು. ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸ್ಪಂದಿಸಲ್ಲ ಎನ್ನುವುದು ಮೂರ್ಖತನ ಎಂದು ಸಿ.ಟಿ.ರವಿ ಸಿಟ್ಟಾದರು.

ಕೇಂದ್ರಕ್ಕೆ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಯೆಂದು ಕೋರಿ ಪತ್ರ ಬರೆದ ಬಿಜೆಪಿ ಹಿರಿಯ ನಾಯಕರಾದ ಬಸವರಾಜ ಪಾಟೀಲ್ ಯತ್ನಾಳ್ ಗೆ ಪಕ್ಷದ ಕೇಂದ್ರ ಸಮಿತಿ ಶೋಕಾಸ್ ನೋಟಿಸ್ ನೀಡಿರುವ ಕುರಿತು ಪತ್ರಿಕ್ರಿಯಿಸಿದ ಪಕ್ಷದ ನಾಯಕರಾಗಿ ತಮ್ಮ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಬೇಕು. ಪಕ್ಷಕ್ಕೆ ಮುಜುಗರ ಅಥವ ಅಗೌರವ ತರುವ ರೀತಿಯಲ್ಲಿ ಯಾರು ಕೂಡ ನಡೆದುಕೊಳ್ಳಬಾರದು. ಸಾರ್ವಜನಿಕರ ಹಿತಾಸಕ್ತಿಯನ್ನು ಹಂಚಿಕೊಳ್ಳಲು ಎಲ್ಲರಿಗೂ ಪಕ್ಷದಲ್ಲಿ ಮುಕ್ತ ಅವಕಾಶ ಇದೆ. ಆದರೆ ವೈಯಕ್ತಿಕವಾಗಿ ಟೀಕೆ ಮಾಡಿರುವುದರಿಂದ ಅವರಿಗೆ ನೋಟಿಸ್ ನೀಡಲಾಗಿದೆಯೆಂದು ಸಚಿವ ರವಿ ಸಮರ್ಥಿಸಿಕೊಂಡರು.

ಪ್ರಧಾನಿ ಮೋದಿ ಅವರನ್ನು ಬೇಟಿಯಾಗಲು ರಾಜ್ಯ ಬಿಜೆಪಿ ನಾಯಕರಿಗೆ ಬೇಟಿಯಾಗಲು ಭಯವೇಕೆ ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭಯಕ್ಕೆ ಜಾಗವಿಲ್ಲ. ಮೋದಿ ಅವರನ್ನು ಬೇಟಿಯಾಗಲು ಯಾರಿಗೂ ಹಿಂಜರಿಕೆ ಇಲ್ಲ. ನಮ್ಮ ಪ್ರಧಾನಿಗಳು ದಿನದ 24 ಗಂಟೆ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಕೂಡ ಸೋನಿಯಾ ಗಾಂಧಿ ಅವರನ್ನು ಬೇಟಿಯಾಗದೇ ವಾಪಸ್ಸು ಬರಲಿಲ್ಲವಾ ಎಂದು ಸಚಿವ ರವಿ ಮರು ಪ್ರಶ್ನೆ ಮಾಡಿದರು.

Advertisement

2020 ರೊಳಗೆ ರಾಜ್ಯಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಠಿಸುವುದರ ಜೊತೆಗೆ ಪ್ರವಾಸಿಗರು ಈಗಿರುವ ಸಂಖ್ಯೆಯನ್ನು ಮೂರು, ನಾಲ್ಕು ಪಟ್ಟು ಹೆಚ್ಚಿಸಿ ರಾಜ್ಯಕ್ಕೆ ಆದಾಯ ತರುವ ದಿಸೆಯಲ್ಲಿ ಬರುವ 2020 ರೊಳಗೆ ರಾಜ್ಯಕ್ಕೆ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯೆಂದು ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದೊಂದಿಗೆ ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪ್ರವಾಸ್ಯೋದ್ಯಮ ನಿರ್ಲಕ್ಷಿತ ಇಲಾಖೆ ಅಂತೂ ಅಲ್ಲ. ಉದ್ಯೋಗ ಸೃಷ್ಠಿಗೆ ವಿಫುಲವಾದ ಅವಕಾಶ ಇರುವ ಕ್ಷೇತ್ರ ಪ್ರವಾಸೋದ್ಯಮ ಇಲಾಖೆ ಎಂದರು.

ರಾಜ್ಯದಲ್ಲಿ 3 ವಿಶ್ವ ಪರಂಪಾರಿಕ ತಾಣಗಳಿವೆ. 5 ರಾಷ್ಟ್ರೀಯ ಉದ್ಯಾನವನ, 30 ವ್ಯನ್ಯಜೀವಿ ತಾಣಗಳು, 40 ವಾಟರ್ ಫಾಲ್ಸ್, 17 ಗಿರಿಶ್ರೇಣಿಗಳು, ಪ್ರವಾಸೋದ್ಯಮ ಅಭಿವೃದ್ದಿಗೆ ರಾಜ್ಯದಲ್ಲಿ ವಿಫುಲವಾದ ಅವಕಾಶಗಳು ಇದ್ದು, ಪ್ರಮುಖವಾಗಿ ಹೆರಿಟೇಜ್, ಕೋಸ್ಟಲ್, ಟೆಂಪಲ್ ಹಾಗೂ ಗ್ರಾಮೀಣ ಅನುಭವ ಪ್ರವಾಸ ಸೇರಿ ನಾಲ್ಕು ವಿಭಾಗಗಳಲ್ಲಿ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದ ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.81 ರಷ್ಟು ಹುದ್ದೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.62 ರಷ್ಟು ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದೆಂದರು. ಆಯಾ ಪ್ರದೇಶ, ವಿಭಾಗವಾರು ಇರುವ ಭಾಷಾ ಸೊಗಡು, ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಉತ್ತೇಜಿಸಲು ಮೇಳಗಳನ್ನು ಆಯೋಜಿಸುವ ಚಿಂತನೆ ಕೂಡ ಇದೆಯೆಂದ ಅವರು, ಪ್ರವಾಸೋದ್ಯದಮ ಜೊತೆಗೆ ಸಂಸ್ಕೃತಿಯನ್ನು ಸೇರಿಸಿ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next