ಇತ್ತೀಚೆಗಷ್ಟೇ ಕನ್ನಡದಲ್ಲಿ ಯೋಗರಾಜ್ ಭಟ್,ಕೆ.ಎಂ ಚೈತನ್ಯ, ಶಶಾಂಕ್, ಪವನ್ ಕುಮಾರ್, ಜಯತೀರ್ಥ ಸೇರಿದಂತೆ ಮುಂಚೂಣಿಯಲ್ಲಿರುವ ಐದು ಜನ ನಿರ್ದೇಶಕರು ಸೇರಿ ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ನೋಡಿರುತ್ತೀರಿ. ಈ ಸಿನಿಮಾ ಶುರುವಾಗೋದಕ್ಕೂ ಮೊದಲೇ, ಈಗಾಗಲೇ ಇತರೆ ಐದು ಜನ ನಿರ್ದೇಶಕರು ಸೇರಿ ನಿರ್ದೇಶಿಸುತ್ತಿರುವ “ಪೆಂಟಗನ್’ ಎಂಬ ಚಿತ್ರಕ್ಕೆ ಸದ್ದಿಲ್ಲದೆ ಚಾಲನೆಕೂಡ ಸಿಕ್ಕಿದ್ದು, ಆ ಚಿತ್ರದಕೆಲ ಭಾಗದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ.
ಹೌದು, ಕನ್ನಡದಲ್ಲಿ ಈಗಾಗಲೇ ಕೆಲ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ಐದು ಜನ ನಿರ್ದೇಶಕರ ಸಾರಥ್ಯದಲ್ಲಿ “ಪೆಂಟಗನ್’ ಚಿತ್ರ ಮೂಡಿಬರುತ್ತಿದ್ದು, ಸುಮಾರು ಎರಡು ತಿಂಗಳ ಹಿಂದೆಯೇ ಈ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ. ಈಗಾಗಲೇ ಈ ಐವರ ಪೈಕಿ ಇಬ್ಬರು ನಿರ್ದೇಶಕರು “ಪೆಂಟಗನ್’ ಚಿತ್ರದಲ್ಲಿ ತಮ್ಮ ನಿರ್ದೇಶನದ ಭಾಗದ ಚಿತ್ರೀಕರಣವನ್ನುಕೂಡ ಮುಗಿಸಿದ್ದಾರೆ. ಅಂದಹಾಗೆ, ಈ ಐವರು ನಿರ್ದೇಶಕರ “ಪೆಂಟಗನ್’ ಸಿನಿಮಾವನ್ನು ನಿರ್ದೇಶಕಕಂ ನಿರ್ಮಾಪಕ ಗುರುದೇಶಪಾಂಡೆ, ತಮ್ಮ “ಜಿ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
“ಪೆಂಟಗನ್’ ಚಿತ್ರದ ಬಗ್ಗೆ ಮಾತನಾಡುವ ಗುರು ದೇಶಪಾಂಡೆ, “ಸುಮಾರು ಆರು ತಿಂಗಳ ಹಿಂದೆಯೇ ಇಂಥದ್ದೊಂದು ಸಿನಿಮಾ ಮಾಡುವ ಯೋಚನೆ ಬಂದಿತು.ಅದರಂತೆ ಒಂದಷ್ಟು ಪ್ಲಾನಿಂಗ್ ಮಾಡಿಕೊಂಡು, ಲಾಕ್ ಡೌನ್ ಮುಗಿಯುತ್ತಿದ್ದಂತೆ “ಪೆಂಟಗನ್’ ಶೂಟಿಂಗ್ ಶುರು ಮಾಡಿದ್ದೆವು. ಅದರಂತೆ ಈ ಸಿನಿಮಾದಲ್ಲಿ ಐದುಕಥೆಗಳಿದ್ದು, ಅದನ್ನು ಐದು ಜನ ನಿರ್ದೇಶಕರು ನಿರ್ದೇಶನ
ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಎರಡು ಕಥೆಗಳನ್ನು ಇಬ್ಬರು ನಿರ್ದೇಶಕರು ನಿರ್ದೇಶಿಸಿದ್ದಾರೆ. ಉಳಿದ ಮೂರು ಕಥೆಗಳನ್ನು ಮೂವರು ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ. ಇದೇ ಡಿಸೆಂಬರ್ ವೇಳೆಗೆ “ಪೆಂಟಗನ್’ ಶೂಟಿಂಗ್ ಪೂರ್ಣವಾಗಲಿದ್ದು, ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಈ ಸಿನಿಮಾವನ್ನು ರಿಲೀಸ್ ಮಾಡುವ ಯೋಚನೆ ಇದೆ’ ಎಂದಿದ್ದಾರೆ.
ಸದ್ಯ ಈ “ಪೆಂಟಗನ್’ ಚಿತ್ರವನ್ನು ನಿರ್ದೇಶಿಸುತ್ತಿರುವ ಐವರು ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಹೆಸರನ್ನು ಗೌಪ್ಯವಾಗಿಟ್ಟಿರುವ ನಿರ್ಮಾಪಕ ಗುರು ದೇಶಪಾಂಡೆ, “ಸದ್ಯ ಸಿನಿಮಾದ ಹೆಸರನ್ನು ರಿವೀಲ್ ಮಾಡಿದ್ದೇವೆ. ಇದೇ ದೀಪಾವಳಿ ಹಬ್ಬದ ವೇಳೆಗೆ, ಈ ಸಿನಿಮಾವನ್ನು ನಿರ್ದೇಶಿಸುತ್ತಿರುವ ಐವರು ನಿರ್ದೇಶಕರ ಹೆಸರಿನ ಜೊತೆಗೆ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಲಿದ್ದೇವೆ’ ಎಂದಿದ್ದಾರೆ.
ಅಂದಹಾಗೆ, ಈ “ಪೆಂಟಗನ್’ ಚಿತ್ರದಲ್ಲಿ ಐವರು ನಿರ್ದೇಶಕರು ನಿರ್ದೇಶಿಸುತ್ತಿರುವ ಐದುಕಥೆಗಳಿಗೂ ಕೂಡ ಒಂದಕ್ಕೊಂದು ಇಂಟರ್ ಲಿಂಕ್ ಇರುತ್ತದೆಯಂತೆ. “ಎಲ್ಲ ರಸಗಳೂ ಈ ಸಿನಿಮಾದಲ್ಲಿದ್ದು,ಕನ್ನಡ ಆಡಿಯನ್ಸ್‌ಗೆ “ಪೆಂಟಗನ್’ ಹೊಸಥರದ ಅನುಭವ ಕೊಡುವ ಸಿನಿಮಾ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.