ಗುರುದೇಶಪಾಂಡೆ ನಿರ್ಮಾಣದ “ಪೆಂಟಗನ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಈ ಮೂಲಕ ಪ್ರೇಕ್ಷಕರಿಗೆ ಚಿತ್ರ ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ. ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ಗುರು ದೇಶಪಾಂಡೆ ಅವರು ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರ ಏಪ್ರಿಲ್ 7ಕ್ಕೆ ತೆರೆಕಾಣುತ್ತಿದೆ.
ಐದು ವಿಭಿನ್ನ ಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ಬರುವ 5 ಕಥೆಗಳಿಗೆ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಹೀಗೆ ಐದು ಜನ ನಿರ್ದೇಶಕರುಗಳು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಮೈಸೂರು ಪಾಕ್, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳಿರುವ ಈ ಚಿತ್ರದಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದಾರೆ.
ಇತ್ತೀಚೆಗೆ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡ ಅನುಭವ ಹಂಚಿಕೊಂಡಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕರಾದ ಮಹೇಶ್ ಸುಖಧರೆ ಹಾಗೂ ಟಿ.ಎಸ್.ನಾಗಾಭರಣ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
“ಪೆಂಟಗನ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕಂ ನಿರ್ದೇಶಕ ಗುರು ದೇಶಪಾಂಡೆ, “ಈ ಚಿತ್ರವನ್ನು ನಾವು 2020ರಲ್ಲಿ ಶುರು ಮಾಡಿದೆವು. ಎರಡೂ ಕೋವಿಡ್ ಅಲೆಗಳನ್ನು ದಾಟಿ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದೇವೆ. ಚಿತ್ರದಲ್ಲಿ ಬರುವ ಡೆತ್ ಥೀಮ್ 5 ಕಥೆಗಳಲ್ಲೂ ಕಾಮನ್ ಆಗಿದ್ದು, ಈ ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್ ಮಾಡುತ್ತಾ ಹೋಗುತ್ತದೆ. ಅಲ್ಲದೇ ಸಾಕಷ್ಟು ಹೊಸ ಪ್ರತಿಭೆಗಳಿಗೆ ಈ ಚಿತ್ರದ ಮೂಲಕ ಅವಕಾಶ ನೀಡಿದ್ದೇವೆ’ ಎಂದು ಹೇಳಿದರು.
ಗ್ರಾಮೀಣ ಸೊಗಡಿನ ದೋಣಿ ಸಾಗಲಿ ಕಥೆಯನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದು, ಇದರ ಮುಖ್ಯ ಪಾತ್ರದಲ್ಲಿ ಗುರುದೇಶಪಾಂಡೆ ಪತ್ನಿ ಕೃತಿಕಾ ದೇಶಪಾಂಡೆ, ರವಿಶಂಕರ್ ಇವರೊಂದಿಗೆ ವಂಶಿ, ಅನುಶಾ ರೈ ಮುಂತಾದವರು ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ತನಿಶಾ, ಪ್ರೇರಣಾ ಕಂಬಂ, ಕಿರಣ್ ನಾಯಕ್, ಕಿಶೋರ್, ರೂಪೇಶ್ ರಾಜಣ್ಣ, ಅಶ್ವಿನಿ, ನಟ ಪೃಥ್ವಿ ಅಂಬರ್ ಮುಂತಾದವರು ಅಭಿನಯಿಸಿದ್ದಾರೆ.