ಮೈಸೂರು: ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ವಿವಿಧ ಅಸಂಘಟಿತ ಕಾರ್ಮಿಕರ ವಂತಿಗೆ ಆಧಾರಿತ ಪಿಂಚಣಿ ತಲುಪುವಂತೆ ಮಾಡಲು ನುರಿತ ತಜ್ಞರಿಂದ ಕಾರ್ಯಾಗಾರ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಗೊಳಿಸಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭದ್ರತೆ ದೃಷ್ಟಿಯಿಂದ ಯೋಜನೆ ಜಾರಿಗೆ: ವಯೋವೃದ್ಧರಾದಾಗ ಕಾರ್ಮಿಕರಿಗೆ ಭದ್ರತೆ ಕಲ್ಪಿ ಸುವ ದೃಷ್ಟಿಯಿಂದ ವಂತಿಗೆ ಆಧಾರಿತ ಪಿಂಚಣಿ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯನ್ನು ಕಾರ್ಮಿಕರಿಗೆ ತಲುಪಿಸುವುದು ಅಗತ್ಯ. ಯೋಜನೆಗೆ ಎಲ್ಲಿ ನೋಂದಣಿ ಮಾಡಿಸಬೇಕು? ಹಣವನ್ನು ಜಮೆ ಮಾಡುವುದು, ಹಿಂತೆಗೆದುಕೊಳ್ಳುವುದು ಹಾಗೂ ಸಬ್ಸಿಡಿ ಇದೆಯೇ? ತಿಂಗಳಿಗೆ ಎಷ್ಟು ಹಣ ಕಟ್ಟಬೇಕು. ಬಡ್ಡಿ ಇದೆಯೇ ಅಥವಾ ಇಲ್ಲವೇ ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯದೇ ಕಾರ್ಮಿಕರು ಗೊಂದಲದಲ್ಲಿರುತ್ತಾರೆ. ಹೀಗಾಗಿ ಅವರ ಸಂದೇಹವನ್ನು ಬಗೆಹರಿಸುವುದು ನೋಂದಣಿ ಅಧಿಕಾರಿಗಳ ಜವಾಬ್ದಾರಿ. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನುರಿತ ತಜ್ಞರಿಂದ ಅರಿವು ಮೂಡಿಸಿ ಎಂದು ಸೂಚಿಸಿದರು.
ಹೆಚ್ಚಾಗಿ ಜನ ಸೇರುವ ಪ್ರದೇಶಗಳಲ್ಲಿ ಶಿಬಿರ ಏರ್ಪಡಿಸಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆಗೆ ನೋಂದಣಿ ಮಾಡಿಸಿ, ಇದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಎಂದರು. ಕರ್ನಾಟಕ ರಾಜ್ಯ ಸಂಯುಕ್ತ ಮೀನುಗಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿ, ವೃದ್ಧಾಪ್ಯವೇತನ ಪಿಂಚಣಿ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಪ್ರಾರಂಭಿಕ ಹಂತದಲ್ಲಿ 500 ಇದ್ದು ಈಗ 1000 ರೂ.ಗಳಷ್ಟು ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತದೆ. ಹೀಗಿರುವಾಗ3,000 ನೀಡಿ ಪ್ರಧಾನ ಮಂತ್ರಿ ಮನ್-ಧನ್ ಯೋಜನೆ ಏಕೆ ಮಾಡಿಸಬೇಕು? ಒಂದು ವೇಳೆ ಕಟ್ಟಿದರೂ ಎರಡೂ ಯೋಜನೆಯ ಹಣ ಫಲಾನುಭವಿಗಳಿಗೆ ಸಿಗುವುದೇ ಮೊದಲಾದವುಗಳ ಬಗ್ಗೆ ತಿಳಿಸಿಕೊಡುವಂತೆ ಕೇಳಿದರು.
ಈ ಯೋಜನೆಗೆ ಸಂಬಂಧಿಸಿದಂತೆ ಹಲವರು ಸಲಹೆಗಳನ್ನು ನೀಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಗಳನ್ನು ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಅಗತ್ಯ ಕ್ರಮತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಡಿಡಿಪಿಐ ಪಾಂಡುರಂಗ, ಸಹಾಯಕ ಕಾರ್ಮಿಕ ಆಯುಕ್ತ ತಮ್ಮಣ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾ ದೇವಿ, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.