ಕುಂದಾಪುರ: ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಬಾಕಿ ಇರುವ ಹಣವನ್ನು ವಾರದೊಳಗೆ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕಂದಾಯ
ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ್ ರಾವ್ ಭರವಸೆ ನೀಡಿದ್ದಾರೆ. “ಉದಯವಾಣಿ’ಯಲ್ಲಿ ಸೆ. 9ರಂದು ಪ್ರಕಟಗೊಂಡ ವಿವಿಧ ಪಿಂಚಣಿ ಯೋಜನೆಯ “ಅನೇಕ ಫಲಾನುಭವಿಗಳ ಖಾತೆಯೇ ಸ್ಥಗಿತ!’ ಎನ್ನುವ ವರದಿಯ ಸಂಬಂಧ ಅವರು ಪ್ರತಿಕ್ರಿಯಿಸಿದರು.
ಕೋವಿಡ್ ಹಾಗೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಹಣ ಹಂಚಿಕೆಯಲ್ಲಿ ಪ್ರಕ್ರಿಯೆಗೆ ಸ್ವಲ್ಪ ಮಟ್ಟಿನ ತೊಡಕಾಗಿದೆ. ಸರಿಯಾದ ದಾಖಲೆಗಳನ್ನು ನೀಡದೇ ಇರುವುದರಿಂದ ಕೆಲವರ ಖಾತೆ ಸ್ಥಗಿತಗೊಂಡಿರಬಹುದು. ಅರ್ಹರು ಮತ್ತೆ ಸಲ್ಲಿಸಿ ಸರಿ ಮಾಡಿಕೊಳ್ಳಬಹುದು. ಸರಕಾರದ ಖಜಾನೆ ಖಾಲಿಯಾಗಿದೆ ಎನ್ನುವ ಆರೋಪವನ್ನು ನಿರಾಕರಿಸಿದರು.
ಉದಯವಾಣಿ ವರದಿ
ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ, ಮನಸ್ವಿನಿ (ಅವಿವಾಹಿತ, ವಿಚ್ಛೇದಿತ), ಮೈತ್ರಿ (ಲೈಂಗಿಕ ಅಲ್ಪಸಂಖ್ಯಾಕರು), ಆ್ಯಸಿಡ್ ಸಂತ್ರಸ್ತರು, ಎಂಡೋ ಸಲ್ಫಾನ್ ಸಂತ್ರಸ್ತರು ಸೇರಿದಂತೆ 9 ಪಿಂಚಣಿ ಯೋಜನೆಗಳಡಿ ಕರಾವಳಿ ಜಿಲ್ಲೆಗಳ 2.77 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದಂತೆ ರಾಜ್ಯದೆಲ್ಲೆಡೆಯ ಲಕ್ಷಾಂತರ ಫಲಾನುಭವಿಗಳಿಗೆ ಹಣ ಸಿಗುತ್ತಿಲ್ಲ. ಇದಲ್ಲದೆ ಕೆಲವರ ಖಾತೆಯೇ ಸ್ಥಗಿತಗೊಂಡಿರುವ ಉದಯವಾಣಿ ವರದಿ ಪ್ರಕಟಿಸಿತ್ತು.