Advertisement

ಹೊಸ ತಾಲೂಕು “ನಾಮಫಲಕ’ದಲ್ಲೇ ಬಾಕಿ !

11:08 AM Sep 17, 2019 | Sriram |

ಮಂಗಳೂರು: ಜನರಿಗೆ ಸರಕಾರಿ ಸೇವೆಗಳು ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಕರಾವಳಿಯಲ್ಲಿ ಎಂಟು ಹೊಸ ತಾಲೂಕುಗಳನ್ನು ಘೋಷಿಸಿ ಉದ್ಘಾಟಿಸಲಾಗಿದೆ. ಆದರೆ ಅನುದಾನ, ಸಿಬಂದಿ ನೇಮಕ, ಆವಶ್ಯಕ ಕಾರ್ಯಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದಕ್ಕೆ ಸರಕಾರ ನಿರಾಸಕ್ತಿ ತೋರಿರುವುದರಿಂದ ಹೊಸ ತಾಲೂಕುಗಳು ನಾಮಫಲಕಕ್ಕಷ್ಟೇ ಸೀಮಿತವಾಗಿವೆ.

Advertisement

ಮೂಡುಬಿದಿರೆ, ಕಡಬ ಮತ್ತು ಮೂಲ್ಕಿ ತಾಲೂಕಿಗೆ ತಹಶೀಲ್ದಾರ್‌ ನೇಮಕವಾಗಿದೆ. ಮೂಡುಬಿದಿರೆ, ಕಡಬ ಮಿನಿವಿಧಾನಸೌಧಗಳಿಗೆ ಹಣ ಮಂಜೂರಾಗಿದ್ದರೆ, ಮೂಲ್ಕಿಗೆ ಜಾಗ ಗುರುತಿಸಲಾಗಿದೆ. ಉಳ್ಳಾಲ ತಾಲೂಕು ಘೋಷಣೆಯಾಗಿರುವುದು ಮಾತ್ರ.ಉಡುಪಿ ಜಿಲ್ಲೆಯ ಹೊಸ ಹೆಬ್ರಿ, ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳಿಗೂ ತಹಶೀಲ್ದಾರ್‌ ನೇಮಕವಾಗಿ ಅಲ್ಪಸ್ವಲ್ಪ ಕೆಲಸ ನಡೆದದ್ದು ಬಿಟ್ಟರೆ ಬೇರೇನೂ ಆಗಿಲ್ಲ.

27 ಇಲಾಖೆಗಳು ಅಗತ್ಯ
ಒಂದು ಪೂರ್ಣಮಟ್ಟದ ತಾಲೂಕು ಅನುಷ್ಠಾನವಾಗಲು ತಹಶೀಲ್ದಾರ್‌, ಮೂವರು ಉಪ ತಹಶೀಲ್ದಾರರು, ನಾಲ್ವರು ಪ್ರಥಮ ದರ್ಜೆ ಮತ್ತು 8 ದ್ವಿತೀಯ ದರ್ಜೆ ಗುಮಾಸ್ತರು, ಇಬ್ಬರು ಅಟೆಂಡರ್‌, ನಾಲ್ವರು ಕಂಪ್ಯೂಟರ್‌ ಆಪರೇಟರ್‌ಗಳ ಆವಶ್ಯಕತೆಯಿದೆ. ಶಿಕ್ಷಣಾಧಿಕಾರಿ, ಖಜಾನಾಧಿಕಾರಿ, ಕೃಷಿ, ತೋಟಗಾರಿಕೆ, ಪಿಡಬ್ಲೂ$Âಡಿ ಸಹಿತ ಹಲವು ಇಲಾಖೆಗಳ ಅಧಿಕಾರಿಗಳು ಅಲ್ಲಿ ಕಾರ್ಯನಿರ್ವಹಿಸಬೇಕು. ಅಗತ್ಯವಿರುವ ಇಲಾಖೆಗಳು 20ರಿಂದ 27. ಆದರೆ ಸದ್ಯ ಈ ತಾಲೂಕುಗಳಲ್ಲಿ ತಹಶೀಲ್ದಾರ್‌ ಮತ್ತು ಇತರ ಒಂದಿಬ್ಬರನ್ನು ಮಾತ್ರ ನೇಮಿಸಲಾಗಿದೆ. ಕಾರ್ಯಭಾರ ನಿಯಂತ್ರಣಕ್ಕಾಗಿ ಮೂಲ ತಾಲೂಕಿನ ಕೆಲವು ಸಿಬಂದಿಯನ್ನು ತಾತ್ಕಾಲಿಕವಾಗಿ ಕಳುಹಿಸಲಾಗುತ್ತಿದೆ. ಇದರ ಪರಿಣಾಮ ಎಲ್ಲ ಕಡೆ ಸಿಬಂದಿ ಕೊರತೆ.

ವರ್ಗಾವಣೆಯಾಗದ “ಭೂಮಿ’!
ಹೊಸ ತಾಲೂಕಾದ ಬಳಿಕ ಬಹುಮುಖ್ಯವಾಗಿ ದಾಖಲೆಗಳನ್ನು ಮೂಲ ತಾಲೂಕಿನಿಂದ ಸ್ಥಳಾಂತರಿಸಬೇಕು. ಕೆಲವು ಹೊಸ ತಾಲೂಕುಗಳಲ್ಲಿ ದಾಖಲೆಗಳ ಕೊಠಡಿಯೇ ಇಲ್ಲ. “ಭೂಮಿ’ ಸಾಫ್ಟ್ವೇರ್‌ ವರ್ಗಾವಣೆಯೂ ಬಾಕಿಯಿದೆ. ಆರ್‌ಟಿಸಿ ಮತ್ತಿತರ ದಾಖಲೆಗಳು, ಅಗತ್ಯಗಳಿಗೆ ಮೂಲ ತಾಲೂಕನ್ನೇ ಆಶ್ರಯಿಸಬೇಕಿದೆ. ಮೂಡುಬಿದಿರೆ ತಾಲೂಕಿನ ಕೆಲವು ಭಾಗಗಳು ಹಿಂದೆ ಕಾರ್ಕಳ ತಾಲೂಕಿನಲ್ಲಿದ್ದ ಕಾರಣ ಇಲ್ಲಿನ ಬಹುತೇಕ ದಾಖಲೆಗಳು ಇನ್ನೂ ಅಲ್ಲೇ ಇವೆ.

ತಾ.ಪಂ.ಇಲ್ಲ
ಹೊಸ ತಾಲೂಕು ಪೂರ್ಣಮಟ್ಟದಲ್ಲಿ ರಚನೆಯಾದ ಬಳಿಕ ತಾ.ಪಂ. ಅಸ್ತಿತ್ವಕ್ಕೆ ಬರುತ್ತದೆ. ಆದರೆ ಕರಾವಳಿಯ ಯಾವುದೇ ಹೊಸ ತಾಲೂಕುಗಳಲ್ಲಿಯೂ ನೂತನ ತಾ.ಪಂ. ರಚನೆಗೆ ಜೀವ ಬಂದಿಲ್ಲ.

Advertisement

ಕಡಬ, ಮೂಡುಬಿದಿರೆ ಉದ್ಘಾಟನೆಯಲ್ಲೇ ಬಾಕಿ!
ಹಲವು ವರ್ಷಗಳ ಹಿಂದೆ ಘೋಷಣೆಯಾಗಿದ್ದ ಕಡಬ ತಾಲೂಕು ಅಧಿಕೃತವಾಗಿ ಉದ್ಘಾಟನೆ ಯಾದದ್ದು ಇದೇ ಮಾರ್ಚ್‌ನಲ್ಲಿ. ಆರು ಬಾರಿ ದಿನಾಂಕ ನಿಗದಿಯಾಗಿ 7ನೇ ಬಾರಿಗೆ ಉದ್ಘಾಟನೆ ಯಾದದ್ದು ಒಂದು ದಾಖಲೆಯೇ. 10 ಕೋ.ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದೆ. ಆದರೆ ತಹಶೀಲ್ದಾರ್‌ ನೇಮಕವೊಂದನ್ನು ಬಿಟ್ಟರೆ ಬೇರೆ ಏನೂ ಆಗಿಲ್ಲ. ಮೂಡುಬಿದಿರೆಯದ್ದೂ ಇದೇ ಕಥೆ.

ಕಂದಾಯ ಸಚಿವರ
ಸಭೆಯಲ್ಲಿ ಚರ್ಚೆ
ಹೊಸ ತಾಲೂಕುಗಳಿಗೆ ಸಂಬಂಧಿಸಿ ಕೆಲವೇ ದಿನಗಳಲ್ಲಿ ಕಂದಾಯ ಸಚಿವರು ವಿಶೇಷ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ. ಹೊಸ ತಾಲೂಕುಗಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುವಂತೆ ಸಭೆಯಲ್ಲಿ ಆಗ್ರಹಿಸುವೆ.
– ಕೋಟ ಶ್ರೀನಿವಾಸ ಪೂಜಾರಿ,
ಸಚಿವರು

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next