Advertisement

ಖಾತೆಗಳಲ್ಲೇ ಬಾಕಿ: ಜಿಲ್ಲಾ ಖನಿಜ ನಿಧಿ ಸದ್ಬಳಕೆಗೆ ಕ್ರಮ

12:18 AM Jun 02, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಉದ್ದೇಶಕ್ಕೆ ಸಂಗ್ರಹವಾಗುವ “ಜಿಲ್ಲಾ ಖನಿಜ ನಿಧಿ(ಡಿಎಂಎಫ್) ಜಿಲ್ಲಾ ಮಟ್ಟದಲ್ಲಿ ಸಮರ್ಪಕ ವಾಗಿ ಸದ್ಬಳಕೆಯಾಗದೆ ಬಾಕಿಯಾಗಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.

Advertisement

ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆ, ಪುನರ್‌ ವಸತಿ ಕಾರ್ಯ, ಕುಡಿಯುವ ನೀರು, ಆರೋಗ್ಯ ಸಂರಕ್ಷಣೆಯ ಧ್ಯೇಯೋದ್ದೇಶ ದೊಂದಿಗೆ 2015ರಿಂದ “ಜಿಲ್ಲಾ ಖನಿಜ ನಿಧಿ’ ಸ್ಥಾಪಿಸಲಾಗಿದೆ.

ಅಚ್ಚರಿ ಎಂದರೆ ಏಳು ವರ್ಷಗಳಲ್ಲಿ ಈ ಖನಿಜ ನಿಧಿಯಡಿ ಸಂಗ್ರಹಗೊಂಡಿರುವ ಒಟ್ಟು ಹಣದಲ್ಲಿ ಅರ್ಧದಷ್ಟು ಕೂಡ ಖರ್ಚಾಗಿಲ್ಲ. ಅಂದರೆ, 2015ರಿಂದ ಇಲಿಯವರೆಗೆ ಗಣಿ ಬಾಧಿತ ಜಿಲ್ಲೆಗಳಿಂದ ಸಂಗ್ರಹಗೊಂಡಿರುವ ಖನಿಜ ನಿಧಿಯ ಒಟ್ಟು ಮೊತ್ತ 3,309.95 ಕೋಟಿ ರೂಪಾಯಿ ಆಗಿದೆ. ಆದರೆ, ವಿನಿಯೋಗವಾಗಿರುವುದು 1,363.95 ಕೋಟಿ ರೂ. ಮಾತ್ರ. ಸುಮಾರು 2,000 ಕೋಟಿ ರೂ. ಆಯಾ ಜಿಲ್ಲಾಡಳಿತದ ಖಾತೆಗಳಲ್ಲಿದೆ.

ಇಷ್ಟೊಂದು ದೊಡ್ಡ ಮೊತ್ತದ ಹಣ ಜಿಲ್ಲಾಡಳಿತದ ಖಾತೆಗಳಲ್ಲಿ ವರ್ಷಗಳಿಂದ ಕೊಳೆಯುತ್ತಿರುವು ದಕ್ಕೆ ಕಾಯಕಲ್ಪ ಒದಗಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿದ್ದು ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಮಾರ್ಗ ಸೂಚಿಯನ್ವಯ ಆಯಾ ಜಿಲ್ಲೆಗಳಲ್ಲಿ ಬಾಕಿಯಿರುವ ಖನಿಜ ನಿಧಿ ಮೊತ್ತವನ್ನು ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿಕೊಂಡು ನಿಗದಿತ ಕಾಲಮಿತಿಯೊಳಗೆ ಸದುಪ ಯೋಗಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಲು ನಿರ್ಧರಿಸಿದೆ.

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಹಾಲಪ್ಪ ಆಚಾರ್‌ “ಜಿಲ್ಲಾ ಖನಿಜ ನಿಧಿಯಡಿಯಲ್ಲಿ ಖರ್ಚಾಗದ ಬಾಕಿ ಮೊತ್ತ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿರುವುದು ನಿಜ. ಏಳು ವರ್ಷಗಳಲ್ಲಿ ಡಿಎಂಎಫ್ ಕೋಟ್ಯಂತರ ಹಣ ಸದ್ವಿನಿ ಯೋಗವಾಗದಿರುವುದು ಗಂಭೀರ ವಿಚಾರ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಶೀಘ್ರ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಖನಿಜ ನಿಧಿ ಹಣ ಜಿಲ್ಲಾಡಳಿತದ ಖಾತೆಗಳಲ್ಲೇ ಸಂಗ್ರಹಗೊಂಡಿ ರುವ ಕಾರಣ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿಕೊಂಡು ಖರ್ಚು ಮಾಡುವುದಕ್ಕೆ

Advertisement

ಅಂತಹ ಸಮಸ್ಯೆಗಳೇನೂ ಇಲ್ಲ’ ಎಂದಿದ್ದಾರೆ.
ನಿಧಿ ಬಾಕಿಗೆ ಕಾರಣ ಹಲವು
ಜಿಲ್ಲಾಧಿಕಾರಿಗಳ ಪ್ರಕಾರ, ಡಿಎಂಎಫ್ ಸಂಗ್ರಹದ ಒಟ್ಟು ಹಣದಲ್ಲಿ ಶೇ.1ರಷ್ಟು ಕೇಂದ್ರ ಸರಕಾರಕ್ಕೆ ರವಾನೆಯಾಗುತ್ತಿದ್ದು, ಶೇ.4ರಷ್ಟು ಹಣ ಆಡಳಿತಾತ್ಮಕ ಉದ್ದೇಶಗಳಿಗೆ ಹಾಗೂ ಶೇ.10 ಹಣವನ್ನು ದತ್ತಿ ನಿಧಿಯಾಗಿ ಮೀಸಲಿರಿಸಲಾಗುತ್ತದೆ. ಉಳಿದ ಶೇ.85ರಷ್ಟು ಹಣದಲ್ಲಿ ಶೇ.60ರಷ್ಟು ನೇರ ಗಣಿಬಾಧಿತ ಪ್ರದೇಶಗಳಿಗೆ ಮತ್ತು ಶೇ.40ರಷ್ಟು ಹಣವನ್ನು ಪರೋಕ್ಷವಾಗಿ ಗಣಿ ಬಾಧಿತ ಪ್ರದೇಶಗಳಿಗೆ ವಿನಿಯೋಗಿಸಬೇಕು. ಆದರೆ, ನೇರ-ಪರೋಕ್ಷ ಗಣಿ ಬಾಧಿತ ಪ್ರದೇಶ ಎನ್ನುವುದಕ್ಕೆ ಸರಿಯಾದ ಮಾರ್ಗಸೂಚಿ ಇಲ್ಲ. ಕೆಲವು ಕಡೆ ಗಣಿ ಇಲಾಖೆ ಮತ್ತು ಜಿಲ್ಲಾಡಳಿತದ ನಡುವೆ ಸಮನ್ವಯದ ಕೊರತೆಯೂ ಇದೆ. ಕೆಲವೆಡೆ ಮೂರು ವರ್ಷದ ನಿಧಿ ಸಂಗ್ರಹದ ಗುರಿಯನ್ನು ಮುಂದಿಟ್ಟು ಕ್ರಿಯಾ ಯೋಜನೆ ರೂಪಿಸಿದ್ದು, ನಿರೀಕ್ಷೆಯಷ್ಟು ನಿಧಿ ಸಂಗ್ರಹವಾಗದಿರುವುದು ಕೂಡ ಸಮಸ್ಯೆಗೆ ಕಾರಣ. ಅಲ್ಲದೆ, ಡಿಎಂಎಫ್ ಹಣ ಬಳಕೆಗೆ ಕಾಲ ಕಾಲಕ್ಕೆ ಗಣಿ ಇಲಾಖೆಯಿಂದ ಜಿಲ್ಲಾಡಳಿತದೊಂದಿಗೆ ಪರಿಶೀಲನ ಸಭೆಗಳು ನಡೆಯದಿರುವ ಕಾರಣ ನಿಧಿ ಸದುಪಯೋಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುತ್ತಾರೆ.

-2015ರಿಂದ 2022ರವರೆಗೆ ಸಂಗ್ರಹಗೊಂಡಿರುವ ಒಟ್ಟು ಹಣ:3,309.95 ಕೋಟಿ ರೂ.
-ಏಳು ವರ್ಷಗಳಲ್ಲಿ ಖರ್ಚಾಗಿರುವ ಒಟ್ಟು ಹಣ:1,363.95 ಕೋಟಿ ರೂ.
-ಈ ನಿಧಿಯಲ್ಲಿ ಪ್ರಗತಿಯಲ್ಲಿರುವ ಒಟ್ಟು ಕಾಮಗಾರಿಗಳು:2745
-ನಿಧಿಯಡಿ ಪೂರ್ಣಗೊಂಡಿರುವ ಒಟ್ಟು ಯೋಜನೆಗಳು:3270
-ನಿಧಿ ಬಳಕೆಯಲ್ಲಿ ಮುಂದಿರುವ ಜಿಲ್ಲೆ:ದಾವಣಗೆರೆ, ರಾಯಚೂರು, ಕೊಪ್ಪಳ, ತುಮಕೂರು
-ಒಟ್ಟು ಆರು ಜಿಲ್ಲೆಗಳಲ್ಲಿ ಶೇ.25ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಿಧಿ ವಿನಿಯೋಗ

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next