Advertisement

ಅನರ್ಹ ಪಡಿತರ ಚೀಟಿಗೆ ದಂಡ; ಬೆಳ್ತಂಗಡಿ ತಾಲೂಕಿನಲ್ಲಿ ಗರಿಷ್ಠ ಸಂಗ್ರಹ

02:06 AM Nov 06, 2019 | mahesh |

ಬೆಳ್ತಂಗಡಿ: ಅನರ್ಹರು ಬಿಪಿಎಲ್‌ ಪಡಿತರ ಚೀಟಿಯ ಪ್ರಯೋಜನ ಪಡೆಯು ವುದನ್ನು ತಪ್ಪಿಸಲು ಜಾರಿಗೊಳಿಸಿದ್ದ ದಂಡ ವಸೂಲಾತಿಯಲ್ಲಿ ಬೆಳ್ತಂಗಡಿ ತಾಲೂಕು ಅವಿಭಜಿತ ದ.ಕ.ದಲ್ಲಿ ಮುಂಚೂಣಿಯಲ್ಲಿದೆ.

Advertisement

ಒಟ್ಟು 648 ಅಕ್ರಮ ಬಿಪಿಎಲ್‌ ಪಡಿತರ ಚೀಟಿ ಗಳು ಕಂಡುಬಂದಿದ್ದು, ದಂಡ 10 ಲಕ್ಷ ರೂ. ತಲುಪಿದೆ. ಈಗಾಗಲೇ 7 ಲಕ್ಷ ರೂ. ವಸೂಲಾಗಿದ್ದು, ಇನ್ನುಳಿದವರು ಬ್ಯಾಂಕ್‌ಗೆ
ದಂಡ ಕಟ್ಟಿ ಚಲನ್‌ ನೀಡುವುದು ಬಾಕಿಯಿದೆ. ಸರಕಾರಿ ಹುದ್ದೆಯಲ್ಲಿದ್ದು, ಬಿಪಿಎಲ್‌ ಸವಲತ್ತು ಪಡೆಯುತ್ತಿದ್ದ ವ್ಯಕ್ತಿಯೋರ್ವರಿಗೆ ಗರಿಷ್ಠ 14,700 ರೂ. ದಂಡ ವಿಧಿಸಲಾಗಿದೆ.

ದ.ಕ., ಉಡುಪಿಯಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 2,945 ಅಕ್ರಮ ಬಿಪಿಎಲ್‌ ಚೀಟಿಗಳನ್ನು ಆಹಾರ ಇಲಾಖೆ ಪತ್ತೆಹಚ್ಚಿ, ರದ್ದುಗೊಳಿಸಿದೆ. ಕೆಲವರು ತಾವಾಗಿಯೇ ಎಪಿಎಲ್‌ಗೆ ಬದಲಾಯಿಸಿಕೊಂಡಿದ್ದಾರೆ.

ದಂಡ ಸ್ಥಗಿತ
ಈ ನಡುವೆ ರಾಜ್ಯ ಸರಕಾರ ಮಂಗಳ ವಾರದಿಂದಲೇ ದಂಡ ವಿಧಿಸದಂತೆ ಮೌಖೀಕ ಆದೇಶ ಹೊರಡಿಸಿದ್ದು, ಈಗಾಗಲೇ ಚಲನ್‌ ನೀಡಿದವರ ಹಣ ಪಡೆಯದಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಲಿಖೀತವಾಗಿ ಇನ್ನಷ್ಟೇ ಬರಬೇಕಿದೆ. ಈಗಾಗಲೇ ದಂಡ ಪಾವತಿಸಿದವರಿಗೆ ಮರುಪಾವತಿ ಆಗಲಿ ದೆಯೇ ಎಂಬುದು ಸ್ಪಷ್ಟವಾಗಿಲ್ಲ.

ದ.ಕ.: 1,899 ಕಾರ್ಡ್‌
ದ.ಕ. ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದ 1,899 ಅನರ್ಹರನ್ನು ಆಗಸ್ಟ್‌ ನಿಂದ ಅಕ್ಟೋಬರ್‌ ಅವಧಿಯಲ್ಲಿ ಪತ್ತೆಹಚ್ಚಲಾಗಿದೆ. ಮಂಗಳೂರು ನಗರ – 87, ಮಂಗಳೂರು ತಾಲೂಕು – 261, ಬಂಟ್ವಾಳ – 547, ಪುತ್ತೂರು – 274, ಬೆಳ್ತಂಗಡಿ – 640, ಸುಳ್ಯ – 119 ಅನರ್ಹ ಕುಟುಂಬಗಳ ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿವೆ.

Advertisement

ಉಡುಪಿ: 1,046 ಪಡಿತರ ಚೀಟಿ
ಉಡುಪಿಯಲ್ಲಿ ಪತ್ತೆಯಾದ 1,046 ಚೀಟಿಗಳ ಪೈಕಿ 693 ಮಂದಿ ಸ್ವಪ್ರೇರಣೆ ಯಿಂದ ಹಿಂದಿರುಗಿಸಿದರೆ, 350 ಕುಟುಂಬಗಳ ಚೀಟಿಯನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. 3 ಕುಟುಂಬಗಳು ಅನರ್ಹವಾಗಿ ದ್ದರೂ ಬಿಪಿಎಲ್‌ ಚೀಟಿ ಹೊಂದಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಆಹಾರ – ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಕುಸುಮಾಧರ್‌ ತಿಳಿಸಿದ್ದಾರೆ.

ದಂಡಕ್ಕೆ ಮಾನದಂಡ
ಸರಕಾರದ ಮಾನದಂಡ ಮೀರಿ ಪಡಿತರ ಚೀಟಿ ಪಡೆದ ದಿನಾಂಕದಿಂದ ಬಿಪಿಎಲ್‌ ಕಾರ್ಡ್‌ ಸರೆಂಡರ್‌ ಮಾಡಿದ ದಿನದ ವರೆಗೆ ದಂಡ ಲೆಕ್ಕ ಹಾಕಲಾಗುತ್ತದೆ. ಒಬ್ಬ ವ್ಯಕ್ತಿಗೆ ಸರಕಾರ 7 ಕೆ.ಜಿ. ಅಕ್ಕಿ ನೀಡುತ್ತಿದೆ. ಕುಟುಂಬದಲ್ಲಿ ಎಷ್ಟು ಸದಸ್ಯರು ಇದ್ದಾರೆ ಎಂಬುದನ್ನು ಪರಿಗಣಿಸಿ ಕೆ.ಜಿ.ಗೆ 28 ರೂ.ಗಳಂತೆ ಆತ ಈವರೆಗೆ ಪಡೆದ ಅಕ್ಕಿಯ ಮೇಲೆ ದಂಡ ಮೊತ್ತ ಲೆಕ್ಕಹಾಕಲಾಗುತ್ತದೆ.

ಸರಕಾರದ ಮಾನದಂಡ ಮತ್ತು ನಿಯಮದ ಪ್ರಕಾರ ಸಂಬಂಧಪಟ್ಟ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಸದ್ಯ ದಂಡ ವಿಧಿಸುವುದನ್ನು ಕೈಬಿಡುವಂತೆ ಮಂಗಳವಾರ ಸರಕಾರದಿಂದ ಸೂಚನೆ ಬಂದಿದೆ. ಆದ್ದರಿಂದ ಸದ್ಯ ದಂಡ ವಿಧಿಸುತ್ತಿಲ್ಲ. ಅಧಿಕೃತ ಆದೇಶ ಪತ್ರ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

 ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next