Advertisement

ಕಣ್ಣಿನ ಶಸ್ತ್ರಚಿಕಿತ್ಸೆಗೆ ಶುಲ್ಕ ವಿಧಿಸಿದ್ದ ನೇತ್ರಕೇಂದ್ರಕ್ಕೆ ದಂಡ

12:02 PM Jul 29, 2018 | Team Udayavani |

ಬೆಂಗಳೂರು: ಕಣ್ಣಿನ ಶಸ್ತ್ರಚಿಕಿತ್ಸೆ ವೇಳೆ ಅನೆಸ್ತೇಶಿಯಾ ನೀಡದಿದ್ದರೂ ಚುಚ್ಚುಮದ್ದಿಗೆ ಹಣ ಪಡೆದಿರುವ ಖಾಸಗಿ ಕಣ್ಣಿನ ಆಸ್ಪತ್ರೆ, ಹಣ ವಾಪಾಸ್‌ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ವೃದ್ಧರೊಬ್ಬರು, ಕಾನೂನು ಹೋರಾಟದಲ್ಲಿ ಸ್ವತಃ ವಾದಿಸಿ ಜಯ ಸಾಧಿಸಿದ್ದಾರೆ.

Advertisement

ಕೊಡಿಗೇಹಳ್ಳಿ ಸಮೀಪದ ಗಣೇಶನಗರ ನಿವಾಸಿ ಸಿ.ವಿ.ಶೆಲ್ವಂತ್‌ ( 75) ಎಂಬುವವರು ಈ ಕುರಿತು ವಾಸನ್‌ ಐ ಕೇರ್‌ ವಿರುದ್ಧ ಸಲ್ಲಿಸಿದ್ದ ದೂರು ಮಾನ್ಯ ಮಾಡಿರುವ ಬೆಂಗಳೂರಿನ ಒಂದನೇ ಗ್ರಾಹಕ ನ್ಯಾಯಾಲಯ, ಇದೀಗ ದೂರುದಾರ ಶೆಲ್ವಂತ್‌ ಅವರಿಂದ ಅನಗತ್ಯವಾಗಿ ಕಟ್ಟಿಸಿಕೊಂಡಿದ್ದ 2500 ರೂ. ವಾಪಾಸ್‌ ನೀಡಬೇಕು ಹಾಗೂ ಅನಗತ್ಯ ಮಾನಸಿಕ ಕಿರಿಕಿರಿ ಉಂಟುಮಾಡಿದ ಹಾಗೂ ಕಾನೂನು ಹೋರಾಟಕ್ಕೆ ಇಳಿಯುವಂತೆ ಮಾಡಿದ ತಪ್ಪಿಗೆ ಐದು ಸಾವಿರ ದಂಡ ಹಾಗೂ ಐದು ಸಾವಿರ ರೂ. ಪರಿಹಾರ ಸೇರಿ ಒಟ್ಟು 12,500 ರೂ. ನೀಡುವಂತೆಯೂ ಆಸ್ಪತ್ರೆಗೆ ಆದೇಶಿಸಿದೆ.

ಸೆಲ್ವಂತ್‌ ಅವರ ಶಸ್ತ್ರಚಿಕಿತ್ಸೆ ಬಳಿಕ ನೀಡಿದ್ದ ಆಸ್ಪತ್ರೆ ಸಿಬ್ಬಂದಿ ನೀಡಿದ್ದ ಡಿಸಾcರ್ಜ್‌ ವರದಿಯಲ್ಲಿ, ಸಾಮಾನ್ಯ ಅನೆಸ್ತೇಶಿಯಾದಲ್ಲೇ (ಟಾಪಿಕಲ್‌ ಅನಸ್ತೇಶಿಯಾ) ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ ಎಂದು ಉಲ್ಲೇಖೀಸಲಾಗಿದೆ. ಜತೆಗೆ, ತಜ್ಞ ವೈದ್ಯರು ದೂರುದಾರರ ಶಸ್ತ್ರಚಿಕಿತ್ಸೆ ವೇಳೆ ಅನೆಸ್ತಿಶಿಯಾ ಅಗತ್ಯವಿದೆ ಎಂಬ ಅಂಶವನ್ನು ಉಲ್ಲೇಖ ಮಾಡಿರಲಿಲ್ಲ. ಈ ಅಂಶಗಳು ಹಾಗೂ ಇನ್ನಿತರೆ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯ ಈ ಆದೇಶ ನೀಡಿದೆ. ಅಲ್ಲದೆ, ಮುಂದಿನ 30 ದಿನಗಳಲ್ಲಿ ಸೆಲ್ವಂತ್‌ ಅವರಿಗೆ 12,500 ರೂ. ನೀಡಬೇಕು ಎಂದು ನಿರ್ದೇಶಿಸಿದೆ. 

ಪ್ರಕರಣ ಏನು?: ಗಣೇಶನಗರದ ಶೆಲ್ವಂತ್‌ ಅವರು ವಯೋ ಸಹಜ ದೃಷ್ಟಿ ದೋಷ ಎದುರಿಸುತ್ತಿದ್ದು, ಪರೀಕ್ಷೆ ಮಾಡಿಸಲೆಂದು 2017ರಲ್ಲಿ ಗಂಗಾನಗರದ ವಾಸನ್‌ ಐ ಕೇರ್‌ಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದರು. ಈ ಸಂಧರ್ಭದಲ್ಲಿ ಎಡ ಕಣ್ಣಿನ ಪೊರೆಯ ಸಮಸ್ಯೆ ಗಂಭೀರವಾಗಿದೆ, ಪೊರೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದರು.

ನಂತರ ಆಸ್ಪತ್ರೆಯ ಕೌನ್ಸಿಲ್‌ ನಮ್ರತಾ ಅವರು, ಪಿ ಸ್ಕ್ಯಾನ್‌, ಇಸಿಜಿ, ರಕ್ತ ಪರೀಕ್ಷೆ ಸೇರಿ ಇನ್ನಿತರೆ ಪರೀಕ್ಷೆಗಳಿಗೆ 1500 ರೂ. ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಕಣ್ಣಿನ ಪೊರೆಯ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ 35 ಸಾವಿರ ರೂ. ಶುಲ್ಕ ಆಗುವುದಾಗಿ ಸಿಬ್ಬಂದಿ ತಿಳಿಸಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಸೆಲ್ವಂತ್‌, ಮುಂಗಡವಾಗಿ 5 ಸಾವಿರ ರೂ. ಪಾವತಿಸಿ, ಬಾಕಿ 30 ಸಾವಿರ ರೂ.ಗೆ ಆರೋಗ್ಯ ವಿಮೆ ಅನ್ವಯವಾಗಲಿದೆ ಎಂದು ಹೇಳಿದ್ದರು.

Advertisement

ಇದಾದ ಬಳಿಕ ನಮ್ರತಾ ಅವರು, 2017ರ ಮೇ 17ರಂದು ಶಸ್ತ್ರಚಿಕಿತ್ಸೆಗೆ  ರಾಜಾಜಿನಗರದ ವಾಸನ್‌ ಐ ಕೇರ್‌ಗೆ ಬರುವಂತೆ ತಿಳಿಸಿದ್ದರು. ಅದರಂತೆ, ಮೇ 17ರಂದು ಐ ಕೇರ್‌ ಸೆಂಟರ್‌ಗೆ ತೆರಳಿದ್ದ ಸೆಲ್ವಂತ್‌, ತಮ್ಮ ಕ್ರೆಡಿಟ್‌ ಕಾರ್ಡ್‌ನಿಂದ ಐದು ಸಾವಿರ ರೂ.ಗಳನ್ನು ಪಾವತಿಸಿದ್ದರು.

ಈ ಸಂಧರ್ಭದಲ್ಲಿ ಶಸ್ತ್ರಚಿಕಿತ್ಸೆ ವೇಳೆ ಅನೆಸ್ತೇಶಿಯಾ ನೀಡುವ ಸಲುವಾಗಿ 2500 ರೂ. ಶುಲ್ಕ ನೀಡಬೇಕು, ಒಂದು ವೇಳೆ ಅನೆಸ್ತೇಶಿಯಾ ನೀಡದಿದ್ದರೆ ಹಣ ವಾಪಾಸ್‌ ಕೊಡುವುದಾಗಿ ಸಿಬ್ಬಂದಿ ತಿಳಿಸಿದ್ದರು. ಇದನ್ನು ನಂಬಿದ್ದ ಸೆಲ್ವಂತ್‌ ಹೆಚ್ಚುವರಿಯಾಗಿ 2500 ರೂ. ಪಾವತಿಸಿದ್ದರು. ಆದರೆ, ಆ ಹಣಕ್ಕೆ ರಸೀದಿ ನೀಡಿರಲಿಲ್ಲ.

ಶಸ್ತ್ರಚಿಕಿತ್ಸೆ ವೇಳೆ ಸಾಮಾನ್ಯ ಅನೇಸ್ತಿಶೀಯಾ ನೀಡಿದ ತಜ್ಞರು, ಕೆಲವೇ ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದರು. ಮಾರನೇ ದಿನ ಆರ್‌.ಟಿ.ನಗರದಲ್ಲಿರುವ ವಾಸನ್‌ ಐ ಕೇರ್‌ಗೆ ತೆರಳಿದ್ದ ಶೆಲ್ವಂತ್‌, ನಮ್ರತಾ ಅವರ ಬಳಿಕ ಶಸ್ತ್ರಚಿಕಿತ್ಸೆ ವೇಳೆ ಅನಸ್ತೇಶಿಯಾ ನೀಡಲಿಲ್ಲ.

ಹೀಗಾಗಿ ನಾನು ಪಾವತಿಸಿದ್ದ 2500 ರೂ. ವಾಪಾಸ್‌ ನೀಡಿ ಎಂದು ಮನವಿ ಮಾಡಿದ್ದರು. ಇದನ್ನು ತಿರಸ್ಕರಿಸಿದ್ದ ನಮ್ರತಾ, ಅನಸ್ತೇಶಿಯಾ ನೀಡಲಾಗಿದೆ ಎಂಬ 2500 ರೂ. ಬಿಲ್‌ ನೀಡಿದ್ದರು. ಇದರಿಂದ ಬೇಸತ್ತ ಶೆಲ್ವಂತ್‌ ಅವರು, ಹಣ ವಾಪಸ್‌ ನೀಡುವಂತೆ ಲೀಗಲ್‌ ನೋಟಿಸ್‌ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

* ಮಂಜುನಾಥ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next