Advertisement

ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನಿಗೆ ದಂಡ

08:13 AM Jun 04, 2019 | Team Udayavani |

ಚಿಕ್ಕಮಗಳೂರು: ಅಮೃತ್‌ ಯೋಜನೆಯಡಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸಮಯ ಮೀರಿದ್ದರೂ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆ ದಂಡ ವಿಧಿಸುವಂತೆ ಶಾಸಕ ಸಿ.ಟಿ. ರವಿ ಸೂಚಿಸಿದರು.

Advertisement

ನಗರಸಭೆ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಮೃತ್‌ ಯೋಜನೆಯಡಿ ನಗರಕ್ಕೆ ದಿನದ 24 ಗಂಟೆ ನೀರು ಪೂರೈಸುವ ಕಾಮಗಾರಿಯನ್ನು ಗುತ್ತಿಗೆದಾರರು ಮೇ ಅಂತ್ಯಕ್ಕೆ ಪೂರ್ಣಗೊಳಿಸಬೇಕಿತ್ತು. ಆದರೂ ಕಾಮಗಾರಿ ಈವರೆಗೂ ಪೂರ್ಣಗೊಳಿಸಿಲ್ಲ ಎಂದರು.

ರಾಮನಹಳ್ಳಿಯ ನೀರು ಶುದ್ಧೀಕರಣ ಘಟಕದಲ್ಲಿ ಕೇವಲ 5-6 ಜನ ಕೆಲಸ ಮಾಡುತ್ತಿದ್ದಾರೆ. ಇಷ್ಟು ಜನ ಕೆಲಸ ಮಾಡಿದರೆ ಕಾಮಗಾರಿ ಪೂರ್ಣಗೊಳ್ಳುವುದಾದರೂ ಹೇಗೆ. ನಗರದ ವಿವಿಧೆಡೆಗಳಲ್ಲಿ ಪೈಪ್‌ಲೈನ್‌ ಅಳವಡಿಸಲು ರಸ್ತೆಯನ್ನು ಅಗೆಯಲಾಗಿದೆ. ಗುತ್ತಿಗೆ ಕರಾರಿನಂತೆ ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಸಿದ ನಂತರ ಅದನ್ನು ಮುಚ್ಚಿ ಮೊದಲಿದ್ದ ರೀತಿಯಲ್ಲಿಯೇ ರಸ್ತೆ ಮಾಡಬೇಕು. ಆದರೆ ನಗರದ ಯಾವುದೇ ಭಾಗದಲ್ಲಿಯೂ ಈ ಕೆಲಸ ಆಗಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಮಾತನಾಡಿ, 154 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೇವಲ 5-10 ಕೆಲಸಗಾರರನ್ನಿಟ್ಟುಕೊಂಡು ಮಾಡಿದರೆ ಹೇಗೆ. ಈ ರೀತಿ ಕೆಲಸ ಮಾಡಿದರೆ ಎಷ್ಟು ವರ್ಷವಾದರೂ ಕಾಮಗಾರಿ ಮುಗಿಯುವುದಿಲ್ಲ. ನಿಮಗೆ ಆಗುವುದಿಲ್ಲ ಎಂದಾದರೆ ಬರೆದುಕೊಡಿ ಬೇರೆಯವರಿಂದ ಕೆಲಸ ಮಾಡಿಸುತ್ತೇವೆ. ನಗರಸಭೆ, ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ಕೊಟ್ಟರೂ ಕೆಲಸ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು.

ಶಾಸಕ ಸಿ.ಟಿ. ರವಿ ಮಾತನಾಡಿ, ನಾಳೆಯೇ ಗುತ್ತಿಗೆದಾರರನ್ನು ಕರೆಸಿ ಅವರೊಂದಿಗೆ ಚರ್ಚಿಸಿ. ಮತ್ತೂಮ್ಮೆ ಎಷ್ಟು ದಿನದಲ್ಲಿ ಯಾವ ಯಾವ ಕೆಲಸ ಮಾಡಬೇಕೆಂಬ ಬಗ್ಗೆ ನಿರ್ಧರಿಸಿ. ಅಷ್ಟು ಕೆಲಸ ಪೂರ್ಣಗೊಳಿಸಲು ಎಷ್ಟು ಜನ ಕೆಲಸಗಾರರು ಬೇಕಾಗುತ್ತದೆ ಎಂಬುದನ್ನು ತೀರ್ಮಾನಿಸಿ. ಅಷ್ಟು ಜನ ಕೆಲಸಗಾರರನ್ನು ಪೂರೈಸಲು ಗುತ್ತಿಗೆದಾರರಿಗೆ ಸಾಧ್ಯವಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಕಾಲವನ್ನು ವಿಸ್ತರಿಸಿಕೊಡಿ ಎಂದು ತಿಳಿಸಿದರು.

Advertisement

ಜಿಲ್ಲಾಕಾರಿ ಡಾ. ಬಗಾದಿ ಗೌತಮ್‌ ಮಾತನಾಡಿ, ನಾಳೆಯೇ ಗುತ್ತಿಗೆದಾರರನ್ನು ನಮ್ಮ ಕಚೇರಿಗೆ ಕಳುಹಿಸಿ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಿ ಎಂದು ಸೂಚಿಸಿದರು. ಒಳಚರಂಡಿ ಕಾಮಗಾರಿ ಕುರಿತು ಮಾಹಿತಿ ಕೇಳಿದಾಗ ಮಾತನಾಡಿದ, ಒಳಚರಂಡಿ ಮಂಡಳಿ ಅಧಿಕಾರಿಗಳು, 1, 2 ಮತ್ತು 3ನೇ ಹಂತದ ಕಾಮಗಾರಿಗಳು ಇನ್ನೂ ನಡೆಯುತ್ತಿವೆ. 4, 5 ಮತ್ತು 6ನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. ಮೊದಲ 3 ಹಂತದ ಕಾಮಗಾರಿಗಳು ಪೂರ್ಣಗೊಳ್ಳದಿರುವುದರಿಂದ ಸಮಸ್ಯೆಯಾಗಿದೆ. ಗುತ್ತಿಗೆದಾರರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಶಾಸಕ ಸಿ.ಟಿ. ರವಿ ಮಾತನಾಡಿ, ಈ ಕಾಮಗಾರಿಯು 2013ನೇ ಸಾಲಿಗೇ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಹಲವು ಬಾರಿ ಹೆಚ್ಚುವರಿ ಸಮಯ ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂ. ವೆಚ್ಚವಾಗಿದೆ. ಇಷ್ಟಾದರೂ ಕಾಮಗಾರಿ ಪೂರ್ಣಗೊಂಡಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿ, ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಸೂಚಿಸಿದರು.

ಕೋಟ್ಯಂತರ ರೂ. ಬಾಕಿ: ಕಂದಾಯ ವಸೂಲಾತಿ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಪ್ರಸ್ತುತ ಸಾಲಿನಲ್ಲಿ 2.50 ಕೋಟಿ ರೂ. ಕಂದಾಯ ವಸೂಲಿ ಬಾಕಿ ಇದೆ ಎಂದು ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಇಷ್ಟೊಂದು ಕಂದಾಯ ಬಾಕಿ ಹೇಗೆ ಉಳಿಯಿತು ಎಂದು ಪ್ರಶ್ನಿಸಿದರು. ಇದರಲ್ಲಿ ಹಳೆಯ ಬಾಕಿಯೂ ಸೇರಿದೆ. ಹಳೇ ಬಾಕಿ ವಸೂಲಾತಿಗೆ ಹೆಚ್ಚಿನ ಶ್ರಮ ಹಾಕುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದಾಗ, ಶಾಸಕ ಸಿ.ಟಿ. ರವಿ ಮಾತನಾಡಿ, ಹಳೇ ಬಾಕಿ ಉಳಿಯಲೂ ನೀವೇ ಕಾರಣ. ಸಮಯಕ್ಕೆ ಸರಿಯಾಗಿ ಕಂದಾಯ ವಸೂಲಿ ಮಾಡಬೇಕು ಎಂದರು.

ಸರ್ಕಾರಿ ಇಲಾಖೆಗಳಿಂದಲೇ ಹೆಚ್ಚಿನ ಕಂದಾಯ ಬಾಕಿ ಇದೆ ಎಂದು ತಿಳಿಸಿದಾಗ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ತಮಗೆ ಮಾಹಿತಿ ನೀಡಿ, ಸಂಬಂಧಪಟ್ಟ ಕಚೇರಿಗಳೊಂದಿಗೆ ಮಾತನಾಡಿ ಕಂದಾಯ ಕಟ್ಟಿಸುವುದಾಗಿ ಹೇಳಿದರು. ಶಿಕ್ಷಣ ಸಂಸ್ಥೆಗಳ ಕಂದಾಯ ಬಾಕಿ ಬಗ್ಗೆ ಮಾತನಾಡಿದ ಶಾಸಕ ಸಿ.ಟಿ.ರವಿ, ಶಿಕ್ಷಣ ಸಂಸ್ಥೆಗಳು ಸೆಸ್‌ ಅನ್ನು ಕಡ್ಡಾಯವಾಗಿ ಕಟ್ಟಲೇಬೇಕು. ಅದಕ್ಕೆ ಯಾವುದೇ ರೀತಿಯ ರಿಯಾಯಿತಿ ಇಲ್ಲ ಎಂದು ತಿಳಿಸಿದರು.

ನಗರದಲ್ಲಿ ಕಸ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ಆರೋಗ್ಯ ನಿರೀಕ್ಷಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಶಾಸಕ ಸಿ.ಟಿ. ರವಿ ತಿಳಿಸಿದಾಗ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಕಂದಾಯ ನಿರೀಕ್ಷಕರು, ತಾವು ಮತ್ತು ಶಾಸಕರುಗಳನ್ನೊಳಗೊಂಡ ವಾಟ್ಸ್‌ ಅಪ್‌ ಗ್ರೂಪ್‌ ಮಾಡಿ, ಆರೋಗ್ಯ ನಿರೀಕ್ಷಕರು ಪ್ರತಿನಿತ್ಯ ಹಾಜರಾತಿ ಪಡೆಯುವುದು, ಪ್ರತಿಯೊಂದು ವಾರ್ಡಿಗೆ ಭೇಟಿ ನೀಡಿ ಕೆಲಸ ಪರಿಶೀಲಿಸಿರುವ ಭಾವಚಿತ್ರಗಳನ್ನು ವಾಟ್ಸ್‌ ಅಪ್‌ ಗ್ರೂಪಿಗೆ ಹಾಕಬೇಕೆಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next