Advertisement
ಡೆಂಗ್ಯೂ ನಿಯಂತ್ರಣ ಜಾಗೃತಿ ಮೂಡಿಸುವ ನೆಲೆಯಲ್ಲಿ ಮಂಗಳೂರು ಪುರಭವನದಲ್ಲಿ ಸೋಮವಾರ ದ.ಕ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಮುಖ್ಯಸ್ಥರ ಜತೆಗೆ ನಡೆಸಿದ ವಿಶೇಷ ಸಭೆಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮಾತನಾಡಿದರು.
Related Articles
Advertisement
ಶಿಕ್ಷಣ ಸಂಸ್ಥೆಯೊಂದರಲ್ಲಿ 4-5 ಮಕ್ಕಳಿಗೆ ಡೆಂಗ್ಯೂ ಜ್ವರ ಬಾಧಿಸಿದ್ದಲ್ಲಿ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದರೆ ಅಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳನ್ನು ಜಿಲ್ಲಾಡಳಿತ ನಿರ್ವಹಿಸಲಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಲಾರ್ವಾ ಉತ್ಪತ್ತಿ ಅತೀ ದೊಡ್ಡ ಪ್ರಮಾಣದಲ್ಲಿದ್ದು, ಸಂಸ್ಥೆಗಳಿಂದ ಅದನ್ನು ನಾಶಪಡಿಸಲು ಸಾಧ್ಯವಾಗದಿದ್ದರೆ ಈ ಬಗ್ಗೆ ತಿಳಿಸಿದರೆ ಮನಪಾ ತಂಡ (ಮಂಗಳೂರು ಪಾಲಿಕೆ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ- 2220309) ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಉಪ ಆಯುಕ್ತೆ ಗಾಯತ್ರಿ ನಾಯಕ್, ಡಿಡಿಪಿಐ ಶಿವರಾಮಯ್ಯ, ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಮಿತಿಯ ಸುರೇಶ್ ಶೆಟ್ಟಿ, ಅಧಿಕಾರಿ ಪ್ರಸನ್ನ ಉಪಸ್ಥಿತರಿದ್ದರು.
ಕೊಂಚ ತೇವಾಂಶದಲ್ಲೂ ಸೊಳ್ಳೆ ಉತ್ಪತ್ತಿ!ಹೂವಿನ ಕುಂಡ, ಫ್ರಿಜ್ ಸೇರಿದಂತೆ ಮನೆಯಲ್ಲಿ ನಿಂತ ನೀರನ್ನು ವಾರಕ್ಕೊಮ್ಮೆ ಬದಲಾಯಿಸುತ್ತಿದ್ದರೆ ಸೊಳ್ಳೆ ಉತ್ಪತ್ತಿ ಸಾಧ್ಯವಿಲ್ಲ. ನೀರು ನಿಂತಲ್ಲಿ ಮಾತ್ರ ಈ ಸೊಳ್ಳೆಯ ಲಾರ್ವಾ ಉತ್ಪತ್ತಿಯಾಗುವುದಲ್ಲ. ಬದಲಿಗೆ ಡೆಂಗ್ಯೂ ರೋಗ ಸೋಂಕಿತ ಲಾರ್ವಾಗಳು ಕೊಂಚ ತೇವಾಂಶ ಇರುವಲ್ಲಿ, ಗೋಡೆಗಳಲ್ಲಿಯೂ ಸಹ ಉಳಿದುಕೊಂಡು ಬಿಟ್ಟರೆ ಅವುಗಳು ಮತ್ತೆ ನೀರಿನ ಸಂಪರ್ಕ ಪಡೆದಾಗ ಮರಿಗಳಾಗಬಹುದು. 1 ಚಮಚದಷ್ಟು ನೀರಿನಲ್ಲಿಯೂ ನೂರಾರು ಲಾರ್ವಾ ಉತ್ಪತ್ತಿಯಾಗುವ ಸಾಧ್ಯತೆಯಿದೆ. ಹಾಗಾಗಿ ಲಾರ್ವಾ ನಾಶ ಮಾಡುವ ಸಂದರ್ಭ ಲಾರ್ವಾ ಇದ್ದ ವಸ್ತುಗಳನ್ನು ತಿಕ್ಕಿ
ತೊಳೆದು ಒಣಗಿಸುವುದು ಬಹು ಮುಖ್ಯ. ಟ್ಯಾಂಕ್‌ಗಳ ಮೇಲಿನ ಮುಚ್ಚಳದ ಸಂದುಗಳು ಸೇರಿದಂತೆ ಮನೆಯ ಒಳಗೆ ಅಥವಾ ಹೊರಗಡೆ ಲಾರ್ವಾ ನಾಶ ಮಾಡುವ ಸಂದರ್ಭ ಜೀವಂತವಾಗಿ ಉಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲೆಯ ಆರೋಗ್ಯ ಕಾರ್ಯಕರ್ತೆ ಮಾಹಿತಿ ನೀಡಿದರು. ಗಪ್ಪಿ ಮೀನು ವಿತರಣೆ
ಸೊಳ್ಳೆಗಳ ಲಾರ್ವಾ ಬೇಟೆಯನ್ನು ಜಿಲ್ಲಾಡಳಿತ ಪ್ರಮುಖ ಆದ್ಯತೆಯನ್ನಾಗಿಸಿಕೊಂಡಿದ್ದು, ಮುಂದಿನ ಎರಡು ತಿಂಗಳವರೆಗೆ ನಿರಂತರವಾಗಿ ನಡೆಯಲಿದೆ. ವರ್ಷಪೂರ್ತಿ ಮುಂದುವರಿಸಲು ಚಿಂತಿಸಲಾಗಿದೆ. ಈ ಮೂಲಕ ಸೊಳ್ಳೆಗಳ ಉತ್ಪತ್ತಿ ಯನ್ನು ನಿಯಂತ್ರಿಸುವುದು ಜಿಲ್ಲಾಡಳಿತದ ಉದ್ದೇಶ. ತೆರೆದ ಬಾವಿಗಳಲ್ಲಿ ಸೊಳ್ಳೆ ಉತ್ಪತ್ತಿ ಯನ್ನು ತಡೆಯಲು ಶೀಘ್ರದಲ್ಲೇ ಗಪ್ಪಿ ಮೀನು ಹಂಚುವ ಅಭಿಯಾನವನ್ನು ಆರಂಭಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಡೆಂಗ್ಯೂ : 21 ಮಂದಿ ಆಸ್ಪತ್ರೆಗೆ ದಾಖಲು
ಮಂಗಳೂರು: ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ 21 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಿರುವ ನಗರದ ಉರ್ವ, ಬರ್ಕೆ, ಅಶೋಕ ನಗರ ಸೇರಿದಂತೆ ಕೆಲವು ಪ್ರದೇಶಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಿರುವ ಪ್ರಕರಣಗಳಲ್ಲಿ 45,000 ರೂ. ದಂಡ ಸಂಗ್ರಹಿಸಲಾಗಿದೆ. ಉಡುಪಿ: ಗ್ರಾಮೀಣ ಭಾಗದಲ್ಲಿ ಹೆಚ್ಚು
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಉಡುಪಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನವರಿಯಿಂದ ಜು. 28ರ ವರೆಗೆ 65 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲೆಯ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್ ಭಟ್ ಮಾಹಿತಿ ನೀಡಿದ್ದಾರೆ.