ಕಾಲೇಜು ಮೆಟ್ಟಿಲೇರುವವರೆಗೆ ಮಕ್ಕಳನ್ನು ಮಕ್ಕಳಂತೆ ಬೆಳೆಸಬೇಕು. ಮಕ್ಕಳು ಸಣ್ಣ ಪುಟ್ಟ ತಪ್ಪು ಮಾಡಿದಾಗ ಕ್ಷಮಿಸಿ ಬಿಡೋಣ, ಬುದ್ಧಿ ಹೇಳಿ ತಿದ್ದುವ ಪ್ರಯತ್ನ ಮಾಡೋಣ ಎಂದು ಸಣ್ಣ ಕತೆ ಹೇಳುತ್ತಲೇ ಬಂದವರು ನಾವೆಲ್ಲ.
ಮಕ್ಕಳಿದ್ದಾಗ ಮಾಡುವ ತಪ್ಪು ಬಹುಬೇಗನೆ ಕ್ಷಮಿಸಿ ಬಿಡಬಹುದು. ಯಾಕೆಂದರೆ ಮುಗ್ಧ ಮನಸಿನ ಮೇಲೆ ಕೋಪ ಬರುವುದು ಕಡಿಮೆ. ಆದರೆ ಕಳ್ಳತನದಂತಹ ತಪ್ಪುಮಾಡಿದಾಗ ಸರಿಯಾಗಿ ಬುದ್ಧಿಹೇಳಬೇಕು. ಇತರ ಸಣ್ಣ ತಪ್ಪುಗಳಿಗೆ ಪೆನ್ಸಿಲ್ ಬರೆಹದಂತೆ, ತಪ್ಪಾದರೆ ರಬ್ಬರ್‌ನಲ್ಲಿ ಅದನ್ನು ಉಜ್ಜಿ ತಿದ್ದಬಹುದು. ಸರಿಯಾಗಿ ಬರೆಯಬಹುದು. ಅದೇ ಮಕ್ಕಳು ಬೆಳೆದು ದೊಡ್ಡವರಾಗಿ ಜವಾಬ್ದಾರಿ ಹೊಂದಿದ ತಂದೆಯೋ, ಹಿರಿಯಣ್ಣನೋ , ಸಮಾಜದಲ್ಲಿ ಗುರುತಿಸುವ ವ್ಯಕ್ತಿಯಾಗಿಯೋ ಬೆಳೆದ ಮೇಲೆ ಸಣ್ಣ / ದೊಡ್ಡ ತಪ್ಪಿಗೂ ಅಪಾರ ಬೆಲೆ ತೆರಬೇಕಾಗುತ್ತದೆ. ಅದು ಪೆನ್ನಿನ ಬರೆಹವಿದ್ದಂತೆ. ಸುಲಭವಾಗಿ ಅಳಿಸಲಾಗದು, ಪ್ರಯತ್ನಪೂರ್ವಕವಾಗಿ ಅಳಿಸುವ ಯತ್ನ ಮಾಡಿದರೂ ಕಲೆ ಉಳಿಯುವ, ಹಾಳೆ ಹರಿಯುವ ಅಪಾಯವಿರುತ್ತದೆ ಎಂದು ಹೇಳಿದ್ದನ್ನು ಕೇಳಿ ಬೆಳೆದ ಹುಡುಗನೊಬ್ಬ ಅವನ ಸ್ನೇಹಿತನಿಗೆ ಫೋನ್ ಮಾಡಿದ್ದ.
ಹುಡುಗನ ಧ್ವನಿಯಲ್ಲಿ ನೋವಿತ್ತು. ಅವನ ಶಾಲೆಯ ವಿಷಯ ಮಾತನಾಡಿ ಫೋನ್ ಇಟ್ಟು ಬಿಟ್ಟ. ಮತ್ತೆ ಸ್ವಲ್ಪ ಸಮಯದ ಅನಂತರ ಆ ಹುಡುಗ ಪುನಃ ಫೋನ್ ಮಾಡಿದ. ಸ್ನೇಹಿತನ ತಾಯಿ ಫೋನ್ ಎತ್ತಿದಳು. ನೋವಿನ ಧ್ವನಿಯಲ್ಲಿ ಆಂಟಿ ಮಗ ಇಲ್ವಾ? ಕೇಳಿದ. ಆಚೆಗೆಲ್ಲೋ ಹೋಗಿದ್ದಾನೆ. ಯಾಕೆ ಮಗೂ ಇಷ್ಟು ಬೇಸರಲ್ಲಿದ್ದೀಯಾ? ಏನಾಯ್ತು? ಎಂದು ಕೇಳಿದರು. ಏನ್ ಹೇಳುವುದು ಆಂಟಿ? ಎಂದು ಅಳಲಾರಂಭಿಸಿದ.
ಏನಾಯ್ತು ಮಗೂ ಅಳಬೇಡ ..ಎಲ್ಲ ಸಮಸ್ಯೆಗೂ ಪರಿಹಾರ ಇದೆ ಎಂದಳು ಆಂಟಿ. ಆ ಕಡೆಯಿಂದ ಹುಡುಗ ಹೇಳಿದ, ಆಂಟಿ ನಾನು ಅತಿಯಾಗಿ ನಂಬಿದವರು, ಅವರೇ ನನಗೆ ಮಾದರಿಯಾಗಬೇಕು ಅಂದೊRಂಡವರು ಇಂದು ಪೆನ್ನಿನ ಬರೆಹ ಬರೆದಿದ್ದಾರೆ. ಅದು ತಪ್ಪಾಗಿದೆಯಂತೆ, ಅಳಿಸೋದು ಕಷ್ಟ, ಅಳಿಸಿದರೂ ಕಲೆ ಉಳಿಯುತ್ತದೆ ಅಥವಾ ಹಾಳೆಯೇ ಹರಿಯುತ್ತದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಎಂದನು. ಇದನ್ನು ಕೇಳಿ ಹೇಗೆ ಸಮಾಧಾನಿಸಬೇಕೆಂದು ತಿಳಿಯದೆ ಆಂಟಿ ಮೌನಿಯಾದಳು. ನಾವು ಮಾಡುವ ತಪ್ಪುಗಳಿಂದ ನಮ್ಮ ಮಕ್ಕಳು, ಮನೆಯವರು ಸಮಾಜದಲ್ಲಿ ತಲೆ ಎತ್ತಿ ತಿರುಗಲು ಸಾಧ್ಯವಾಗದು. ನಮ್ಮ ಪ್ರತೀ ಹೆಜ್ಜೆಯನ್ನು ಸರಿದಾರಿಯಲ್ಲಿ ಇಡುತ್ತಾ ಸಾಗುವ ಜಾಗೃತ ಮನಸ್ಸು ನಮಗಿದ್ದರೆ, ನಾವು ಸನ್ಮಾರ್ಗದಲ್ಲಿ ನಡೆಯುತ್ತೇವೆ. ಅದೇ ನಮ್ಮವರಿಗೆ ನಾವು ಕೊಡುವ ಗೌರವ, ಸಮಾಜಕ್ಕೆ ನೀಡುವ ದೇಣಿಗೆ. ಊರಿಗೆ ಕೀರ್ತಿ ಕಳಶವಾಗದಿದ್ದರೂ ಸರಿ, ಊರಿನ ಹೆಸರಿಗೆ ಮಸಿಬಳಿಯುವ, ಸಮಾಜಘಾತಕ ಕೆಲಸ ಮಾಡುವವರು ನಾವಾಗದಿರೋಣ.
ಪೂರ್ಣಿಮಾ ಕಮಲಶಿಲೆ
ಕುಂದಾಪುರ