ಬೆಂಗಳೂರು: ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದ ಆಗಮಿಸುತ್ತಿದ್ದಂತೆ ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ಮೇ 31ರಂದು ವಿದೇಶದಿಂದ ಮರಳುವುದಾಗಿ ಅಜ್ಞಾತ ಸ್ಥಳದಿಂದ ಪ್ರಜ್ವಲ್ ವಿಡಿಯೋ ಹರಿಯ ಬಿಟ್ಟ ಕೂಡಲೇ ಎಸ್‌ಐಟಿಯು ಅಲರ್ಟ್ ಆಗಿದೆ.
ಏರ್‌ಪೋರ್ಟ್‌ಗೆ ಪ್ರಜ್ವಲ್ ಕಾಲಿಡುತ್ತಿದ್ದಂತೆ ಬಂಧಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಎಸ್‌ಐಟಿ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ.
ಕಾನೂನು ತಜ್ಞರ ಜೊತೆಗೆ ಚರ್ಚೆ: ಪ್ರಜ್ವಲ್ ಆಗಮಿಸುತ್ತಿದ್ದಂತೆಯೇ ಬಂಧನದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಕಾನೂನು ತಜ್ಞರ ಜೊತೆಗೆ ಎಸ್‌ಐಟಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಪ್ರಜ್ವಲ್ ಯಾವ ವಿಮಾನದಲ್ಲಿ ಬರುತ್ತಾರೆ ? ಯಾವ ನಿಲ್ದಾಣಕ್ಕೆ ಬರುತ್ತಾರೆ ? ಎಂಬುದನ್ನೂ ಗಮನಿಸಲಾಗುತ್ತಿದೆ. ಈಗಾಗಲೇ ಜರ್ಮನಿಯಿಂದ ಬೆಂಗಳೂರಿಗೆ ಈ ಹಿಂದೆ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದುಪಡಿಸಿದ್ದರು. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಜ್ವಲ್ ಸಂಪರ್ಕಕ್ಕೂ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಿ ಇಂಟರ್‌ಪೋಲ್ ನಿಂದ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಬಂಧನದ ಬಳಿಕ ಮುಂದೇನು ?
ಬಂಧನದ ಬಳಿಕ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಮೆಡಿಕಲ್ ಚೆಕಪ್ ನಡೆಸಿ ನ್ಯಾಯಾಯದ ಮುಂದೆ ಹಾಜರುಪಡಿಸಲಿದ್ದಾರೆ. ಪ್ರಕರಣದ ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ವಶಕ್ಕೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ನ್ಯಾಯಾಲಯವು ಎಸ್‌ಐಟಿ ವಶಕ್ಕೆ ನೀಡಿದರೆ, ಕೂಲಂಕಷವಾಗಿ ವಿಚಾರಣೆ ನಡೆಸಲಿದ್ದಾರೆ. ಇತ್ತ ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ.