Advertisement
ಅನುಭವಿ ನಿರ್ದೇಶಕರ ಕೈಯಲ್ಲಿ “ಲೋಫರ್ಸ್’ ಸ್ಥಿತಿಗತಿಯನ್ನಂತೂ ಹೇಳತೀರದು! ಒಂದು ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಆದರೆ, ಅದ್ಯಾವುದೂ ಪರಿಣಾಮಕಾರಿಯಾಗಿಲ್ಲ ಅನ್ನೋದೇ ವಾಸ್ತವ ಸತ್ಯ. ಇಲ್ಲಿ ಕಥೆ ಹುಡುಕುವಂತಿಲ್ಲ. ಯಾಕೆಂದರೆ, ಹೇಳಿಕೊಳ್ಳುವಂತಹ ಕಥೆಯೂ ಇಲ್ಲಿಲ್ಲ.
Related Articles
Advertisement
ಆದರೆ, ಧಾವಂತದಲ್ಲಿ ಎಲ್ಲವನ್ನೂ ಒಂದೇ ಸಲಕ್ಕೆ ಹೇಳಿ ಮುಗಿಸಿದ್ದರ ಪರಿಣಾಮ, ಇಲ್ಲಿ ಯಾವುದೇ ಹೊಸ ಬದಲಾವಣೆಯೂ ಇಲ್ಲ. ಪೋಲಿ ಮಾತುಗಳ ಜೊತೆ ಸಾಗುವ ಮೊದಲರ್ಧ ಏನಾಗುತ್ತಿದೆ ಎಂಬ ಗೊಂದಲದಲ್ಲೇ ಮುಗಿಯುತ್ತದೆ. ದ್ವಿತಿಯಾರ್ಧ ಲೋಫರ್ಸ್‌ಗಳು ಕುತೂಹಲ ಕೆರಳಿಸುತ್ತಾ ಹೋಗುತ್ತಾರೆ. ಇಲ್ಲಿ ಸೋಮಾರಿತನವಿದೆ,
ಮೋಜು, ಮಸ್ತಿ, ಪ್ರೀತಿ ಗೀತಿ ಇತ್ಯಾದಿ ಜೊತೆಗೊಂದು ವ್ಯಥೆ ಕೂಡ ಇದೆ. ಅದೊಂದೇ ಚಿತ್ರದ ಜೀವಾಳ. ಆ ವ್ಯಥೆ ಕೇಳಬೇಕೆಂಬ ಕುತೂಹಲವಿದ್ದರೆ, “ಲೋಫರ್ಸ್’ ಆಡುವ ಆಟಗಳನ್ನೆಲ್ಲಾ ನೋಡಿಬರಬಹುದು. ನಾಲ್ವರು ಹುಡುಗರು ಮತ್ತು ಮೂವರು ಹುಡುಗಿಯರದು ಅಡ್ಡದಾರಿ ಹಿಡಿಯುವ ಬದುಕು.
ಜೀವನವನ್ನು ಬೈದುಕೊಳ್ಳುತ್ತಾ, ಶ್ರಮಪಡದೆ, ತಪ್ಪು ಕೆಲಸಗಳನ್ನು ಮಾಡಿ, ರಾಯಲ್ ಲೈಫ್ ಕಾಣಬೇಕು ಎಂಬ ಮನಸ್ಥಿತಿ ಇರುವ ಗೆಳೆಯರು. ಆ ಪೈಕಿ ಒಬ್ಬ ಒಂದು ವಿಶಾಲವಾದ ಬಂಗಲೆಗೆ ಆಗಾಗ ಹೋಗಿ ಆತ್ಮಗಳ ಜೊತೆ ಮಾತಾಡಿ ಬರುತ್ತಿರುತ್ತಾನೆ. ಅದು ನಿಜಾನಾ, ಸುಳ್ಳೋ ಅನ್ನುವ ಗೊಂದಲದಲ್ಲಿರುವ ಅವನು, ಗೆಳೆಯರೊಂದಿಗೆ ನಡೆದ ವಿಷಯ ಹಂಚಿಕೊಳ್ಳುತ್ತಾನೆ.
ಎಲ್ಲರೂ ಆ ಬಂಗಲೆ ಕಡೆ ಹೊರಡಲು ನಿರ್ಧರಿಸುತ್ತಾರೆ. ಅಲ್ಲೊಂದಷ್ಟು ಆತ್ಮಗಳ ಕಾಟ ಶುರುವಾಗುತ್ತೆ. ಅಷ್ಟರಲ್ಲೇ ಅವರೆಲ್ಲರ ಲೈಫಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಆ ಕೆಟ್ಟ ಘಟನೆ ಇಡೀ ಚಿತ್ರದ ತಿರುವು. ಹಾಗಾದರೆ, ಅವರೆಲ್ಲರೂ ಆ ಆತ್ಮಗಳ ಜೊತೆ ಸಂಘರ್ಷಕ್ಕಿಳಿಯುತ್ತಾರಾ, “ಲೋಫರ್ಸ್’ಗಳಲ್ಲಿ ಒಳ್ಳೇತನ ಅನ್ನುವುದಿಲ್ಲವೇ?
ಕೊನೆ ಘಳಿಗೆಯಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರಾ? ಈ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ, ಸಿನಿಮಾ ನೋಡಬಹುದು. ಅರ್ಜುನ್ ಆರ್ಯ ಡ್ಯಾನ್ಸ್ ಮತ್ತು ಫೈಟ್ಸ್‌ನಲ್ಲಿ ಹಿಂದೆ ಉಳಿದಿಲ್ಲ. ನಟನೆಗೆ ಸಿಕ್ಕಿರುವ ಜಾಗವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕೆಂಪೇಗೌಡ ಅವರ ಕಾಮಿಡಿ ತುಸು ಹೆಚ್ಚಾಯಿತೇ ಹೊರತು, ಅವರ ಹಾಸ್ಯಕ್ಕೆ ನಗುವೇ ಬರಲ್ಲ.
ಚೇತನ್, ಮನು ನಿರ್ದೇಶಕರ ಅಣತಿಯಂತೆ ಮಾಡಿದ್ದಾರೆ. ಸಾಕ್ಷಿ, ಶ್ರಾವ್ಯಾ, ಸುಷ್ಮಾ ಅವರಿಲ್ಲಿ ಗ್ಲಾಮರ್‌ಗಷ್ಟೇ ಸೀಮಿತ. ಟೆನ್ನಿಸ್‌ಕೃಷ್ಣ, ಉಮೇಶ್ ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ. ದಿನೇಶ್ ಕುಮಾರ್ ಸಂಗೀತಕ್ಕಿನ್ನೂ ಸ್ವಾದ ಇರಬೇಕಿತ್ತು. ಪ್ರಸಾದ್ ಬಾಬು ತಮ್ಮ ಕ್ಯಾಮೆರಾ ಕೈಚಳಕದಲ್ಲಿ “ಲೋಫರ್ಸ್’ಗಳನ್ನು ಅಂದಗಾಣಿಸಿದ್ದಾರೆ.
ಚಿತ್ರ: ಲೋಫರ್ಸ್ನಿರ್ಮಾಣ: ಬಿ.ಎನ್. ಗಂಗಾಧರ್
ನಿರ್ದೇಶನ: ಎಸ್. ಮೋಹನ್
ತಾರಾಗಣ: ಅರ್ಜುನ್ ಆರ್ಯ, ಚೇತನ್, ಮನು, ಕೆಂಪೇಗೌಡ, ಸುಷ್ಮಾ, ಶ್ರಾವ್ಯಾ, ಸಾಕ್ಷಿ, ಟೆನ್ನಿಸ್ ಕೃಷ್ಣ, ಉಮೇಶ್, ಇತರರು. * ವಿಭ