Advertisement

ಪೆಲತ್ತಡ್ಕ-ಕುಕ್ಕನಡ್ಕ ಸೇತುವೆ ನಿರ್ಮಾಣ ಬೇಡಿಕೆ ಮುನ್ನೆಲೆಗೆ

03:29 AM Apr 22, 2021 | Team Udayavani |

ಕಾರ್ಕಳ: ಮಳೆಗಾಲಕ್ಕೆ ಮೊದಲೇ ಈದು ಗ್ರಾಮದ ಪೆಲತ್ತಡ್ಕ- ಕುಕ್ಕನಡ್ಕ ಸೇತುವೆ ನಿರ್ಮಾಣ ಬೇಡಿಕೆ ಪ್ರಕ್ರಿಯೆಗಳಿಗೆ ಚಾಲನೆ ದೊರಕಿದೆ. ಇದಕ್ಕಾಗಿ ಕೆಆರ್‌ಡಿಎಲ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಶಿಥಿಲಗೊಂಡ ಸೇತುವೆ
ಈದು ಗ್ರಾಮದ ಪೆಲತ್ತಕಟ್ಟೆ (ಕುಕ್ಕನಡ್ಕ) ಎಂಬಲ್ಲಿ ಬಾರೆ ಭಾಗದಿಂದ ಹರಿದು ಬರುವ ಹೊಳೆಗೆ ಅಡ್ಡಲಾಗಿ ಸೇತುವೆ ಯಿದೆ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಮುಳುಗು ಸೇತುವೆ ಶಿಥಿಲಗೊಂಡಿದೆ.

ನೆರೆ ಸಂದರ್ಭ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸೇತುವೆಗೆ ಬಡಿದು ಇದು ಶಿಥಿಲಗೊಂಡಿತ್ತು. ಕಳೆದ ಎಂಟು ವರ್ಷದಿಂದ ಸೇತುವೆ ಶಿಥಿಲಗೊಂಡ ಸ್ಥಿತಿಯಲ್ಲೇ ಇದೆ.

ಪ್ರಮುಖ ಸಂಪರ್ಕ ಸೇತು
ಪೆಲತ್ತಕಟ್ಟೆ, ಕಂಪೆಟ್ಟು, ಕನ್ಯಾಲು, ಕುಂಟೊನಿ, ಎದ್ಕೊಟ್ಟು, ಜಗಂದಲ್ಕೆ ಮುಂತಾದ ಪ್ರದೇಶಗಳಿಗೆ ಹೊಸ್ಮಾರುವಿ ನಿಂದ ಸಂಪರ್ಕ ಕಲ್ಪಿಸಲು ಈ ಸೇತುವೆ ಅಗತ್ಯ. 30ಕ್ಕೂ ಅಧಿಕ ಮಲೆಕುಡಿಯ ಸಮುದಾಯದವರು ಸಹಿತ ಅನೇಕ ಕುಟುಂಬಗಳಿಗೆ ಈ ಸೇತುವೆ ಸಂಪರ್ಕ ಸಾಧನವಾಗಿದೆ. ಶಾಲೆಗೆ ತೆರಳು ವವರು, ನಾಗರಿಕರು, ಮಹಿಳೆಯರು ಆಹಾರ ಸಾಮಗ್ರಿ, ಪಡಿತರ ಇತ್ಯಾದಿ
ಗಳನ್ನು ತರಲು ಪ್ರತಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿತ್ತು. ಈ ಸಂದರ್ಭ ಮಕ್ಕಳು ಅಘೋಷಿತ ರಜೆಯಲ್ಲಿರು ತ್ತಿದ್ದರು. ಕಳೆದ ವರ್ಷ ಮಳೆಗಾಲದಲ್ಲಿ ಎರಡು ಬಾರಿ ಈ ಸೇತುವೆ ನೆರೆಗೆ ಕೊಚ್ಚಿ ಹೋಗಿತ್ತು. ತಹಶೀಲ್ದಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಅನುದಾನಕ್ಕೆ ಪ್ರಯತ್ನ
ಸೇತುವೆ ಮೇಲ್ದರ್ಜೆಗೇರಿಸಬೇಕು, ಇದನ್ನು ಎತ್ತರಿಸಿ, ಸಾರ್ವಜನಿಕ ಸಂಚಾರಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿ ಶಾಸಕರು ಅನುದಾನಕ್ಕೆ ಪ್ರಯತ್ನ ನಡೆಸಿದ್ದರು. ಅಂದಾಜು ಪಟ್ಟಿ ಸಿದ್ಧಪಡಿಸಿ, 50 ಲಕ್ಷ ರೂ. ಅನುದಾನ ದೊರಕಿತ್ತು. ಆದರೆ ಹೆಚ್ಚಿನ ಅನುದಾನಕ್ಕೆ ಶಾಸಕರು ಪ್ರಯತ್ನ ನಡೆಸಿದ್ದರು. ಕೇಂದ್ರದಿಂದ ಹೆಚ್ಚಿನ ಅನುದಾನದ ಅನುಮೋದನೆಯ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ರಾಜ್ಯಕ್ಕೆ ವರದಿ ತಲುಪಿದ್ದು, ಅದರಂತೆ ಪಟ್ಟಿ ಸಿದ್ಧಪಡಿಸಲು ಕೆಆರ್‌ಡಿಸಿಎಲ್‌ ಅಧಿಕಾರಿಗಳು, ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿದರು.

Advertisement

ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್‌, ಎಪಿಎಂಸಿ ಸದಸ್ಯ ನಾರಾಯಣ ಸುವರ್ಣ, ತಾ.ಪಂ.
ಸದಸ್ಯೆ ಮಂಜುಳಾ, ಸ್ಥಳೀಯರಾದ ಹರೀಶ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮಳೆಗಾಲದಲ್ಲಿ ಸೇತುವೆ ಮುಳುಗಿ ತೊಂದರೆಯಾಗುತ್ತಿರುವುದು ಹಾಗೂ ಕೃತಕ ನೆರೆ ಉಂಟಾಗಿ ಆಗುತ್ತಿರುವ ಸಂಕಷ್ಟಗಳ ಸರಮಾಲೆಯ ಕುರಿತು ಮಾ. 14ರಂದು ಸುದಿನದಲ್ಲಿ ವಿಸ್ತೃತ ವರದಿ ಪ್ರಕಟಗೊಂಡಿತ್ತು.

ಅಂದಾಜು ಪಟ್ಟಿ ಸಿದ್ಧತೆ
ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ಅಪೇಕ್ಷಿಸಿ ಅನುದಾನಕ್ಕೆ ಪ್ರಯತ್ನ ನಡೆಸಲಾಗಿತ್ತು. ಅದರ ಮುಂದು ವರಿದ ಭಾಗವಾಗಿ ಕೆಆರ್‌ಡಿಸಿಎಲ್‌ ಅಧಿಕಾರಿಗಳು ಅಂದಾಜು ಪಟ್ಟಿ ಸಿದ್ಧತೆಗಾಗಿ ಸ್ಥಳ ತನಿಖೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣ ಕೈಗೂಡಲಿದೆ.
-ವಿ. ಸುನಿಲ್‌ ಕುಮಾರ್‌ , ಶಾಸಕರು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next