Advertisement
ಉಡುಪಿ ಜಿಲ್ಲೆ ಬಿಟ್ಟರೆ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಂಡ ಜಿಲ್ಲೆ ಬಾಗಲಕೋಟೆ ಎಂದರೆ ತಪ್ಪಾಗಲಿಕ್ಕಿಲ್ಲ. ಪೇಜಾವರ ಶ್ರೀಗಳು ಜಿಲ್ಲೆಗೆ ಭೇಟಿ ನೀಡಿದ್ದರ ಲೆಕ್ಕವಿಲ್ಲ. ಅವರು ಜಿಲ್ಲೆಗೆ ಸುಮಾರು 1960-65ರಿಂದ ನಿರಂತರವಾಗಿ ಭೇಟಿ ನೀಡಿದ್ದಾರೆ. ಈ ಭಾಗದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ನಿವಾರಣೆಗೆ ಸ್ವತಃ ಶ್ರೀಗಳೇ ದಲಿತರ ಮನೆಗಳಿಗೆ ಭೇಟಿ ನೀಡಿ, ಪಾದಪೂಜೆ ಮಾಡಿಸಿಕೊಳ್ಳುವುದರೊಂದಿಗೆ ದಲಿತರೊಂದಿಗೆ ಸೌಹಾರ್ದತೆ ಬೆಳೆಸಲು ಪ್ರಮುಖ ಕಾರಣರಾಗಿದ್ದರು.
Related Articles
Advertisement
ಬಡ ಬ್ರಾಹ್ಮಣ ಮಕ್ಕಳಿಗೆ ವಸತಿ ನಿಲಯ: 1969ರಲ್ಲಿ ಅಖೀಲ ಭಾರತ ಮಾಧ್ವ ಮಹಾ ಮಂಡಳದ ನೇತೃತ್ವದಲ್ಲಿ ನಗರದಲ್ಲಿ ಬಡ ಬ್ರಾಹ್ಮಣರ ಮಕ್ಕಳಿಗೆ ಉಚಿತ ವಸತಿ ನಿಲಯ ಆರಂಭಿಸಿದ್ದಾರೆ. ಆಗಿನ ಸಂದರ್ಭದಲ್ಲೇ 24 ಕೊಠಡಿಗಳನ್ನು ನಿರ್ಮಿಸಿ ಬಡ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಈ ವಸತಿ ನಿಲಯದಲ್ಲಿದ್ದು ಶಿಕ್ಷಣ ಪಡೆದವರೀಗ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ವೈದ್ಯರು ಹೀಗೆ ಸಮಾಜದ ಹಲವು ಉನ್ನತ ಹುದ್ದೆಯಲ್ಲಿದ್ದಾರೆ.
ರೈತರ ಬ್ಯಾರೇಜ್‌ಗೆ ಶ್ರಮದಾನ: ಕೇಂದ್ರದ ಮಾಜಿ ಸಚಿವ, ಜಮಖಂಡಿಯ ಮಾಜಿ ಶಾಸಕ ದಿ.ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ 1989ರಲ್ಲಿ ಜಮಖಂಡಿ ತಾಲೂಕು ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರೇ ನಿರ್ಮಿಸಿದ ಬ್ಯಾರೇಜ್ ಇಡೀ ದೇಶದ ಗಮನ ಸೆಳೆದಿದೆ. 94ಲಕ್ಷ ರೂ.ಗಳಲ್ಲಿ 11 ತಿಂಗಳ ಅವಧಿಯಲ್ಲಿ ಕಟ್ಟಿದ ಈ ಬ್ಯಾರೇಜ್ ಇಂದು ಸಾವಿರಾರು ರೈತರಿಗೆ ನೀರು ಒದಗಿಸುತ್ತಿದೆ. ರೈತರೇ ಸೇರಿ ಬ್ಯಾರೇಜ್ ಕಟ್ಟುತ್ತಿರುವ ವಿಷಯ ಕೇಳಿ ಜಮಖಂಡಿಗೆ ಆಗಮಿಸಿದ ಶ್ರೀಗಳು ಇಡೀ ಒಂದು ದಿನ ರೈತರೊಂದಿಗಿದ್ದು ಶ್ರಮದಾನ ಮಾಡಿದ್ದರು. ಅಲ್ಲದೇ ತಮ್ಮ ಮಠದಿಂದ ರೈತರ ನಿಧಿಗೆ ಒಂದಷ್ಟು ಆರ್ಥಿಕ ನೆರವೂ ನೀಡಿದ್ದರು.
ದೇಣಿಗೆ ಹಣ ಸಮಾಜಕ್ಕೆ: ಉಡುಪಿ ಮಠದ ಪೀಠಾಧಿಪತಿಗಳಾದ 80ನೇ ವರ್ಷದ ಕಾರ್ಯಕ್ರಮವನ್ನು 2012ರಲ್ಲಿ ಬಾಗಲಕೋಟೆಯ ಸಕ್ರಿ ಕಾಲೇಜು ಮೈದಾನದಲ್ಲಿ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಭಕ್ತರು ನೀಡಿದ ಕಾಣಿಕೆಯ ಹಣ ಸುಮಾರು 14 ಲಕ್ಷ ರೂ. ಗಳನ್ನು ನವನಗರದಲ್ಲಿ ಕೃಷ್ಣ ಮಂದಿರ, ಗೋ ಶಾಲೆ ನಿರ್ವಹಣೆ ಹಾಗೂ ಅರ್ಥಕ್ಕೆ ನಿಂತಿದ್ದ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಪೂರ್ಣಗೊಳಿಸಲು ನೀಡಿದ್ದರು. ಅದರ ಫಲವಾಗಿ ಒಂದು ನವನಗರದಲ್ಲಿ ಕೃಷ್ಣ ಮಠ ಹಾಗೂ ವಿದ್ಯಾರ್ಥಿ ನಿಲಯ ತಲೆ ಎತ್ತಿದೆ. ಕೃಷ್ಣ ಮಠದಲ್ಲಿ ಇಬ್ಬರು ಆಚಾರ್ಯರನ್ನು ನಿಯೋಜಿಸಿ, ನಿರಂತರ ಪೂಜೆ, ಪುನಸ್ಕಾರ, ಧರ್ಮ ಸೇವೆ ನಡೆಸಲು ಅಪ್ಪಣೆ ಕೊಡಿಸಿದ್ದರು.
-ಶ್ರೀಶೈಲ ಕೆ. ಬಿರಾದಾರ