ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎಲ್ಲ ಭಕ್ತರು ಪಾಲ್ಗೊಳ್ಳಲು ಪ್ರಬೋಧಿನಿ ಏಕಾದಶಿಯಿಂದ ಗೀತಾಜಯಂತಿ ಏಕಾದಶಿಯವರೆಗೆ (ನ. 25-ಡಿ. 25) ವ್ಯಾಪಕ ಆಂದೋಲನವನ್ನು ನಡೆಸಲು ಶನಿವಾರ ಆನ್‌ಲೈನ್‌ನಲ್ಲಿ ನಡೆದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸಭೆ ನಿರ್ಧರಿಸಿದೆ.
ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯವ್ರತದಲ್ಲಿರುವ ಟ್ರಸ್ಟ್ ಸದಸ್ಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆನ್‌ಲೈನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಂದಿರ ನಿರ್ಮಾಣಕ್ಕೆ ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನವನ್ನು ಎಲ್ ಆ್ಯಂಡ್ ಟಿ ಕಂಪೆನಿಗೆ ಕೊಡಲಾಗುತ್ತದೆ. ಸುಮಾರು 200 ಅಡಿ ಆಳದಲ್ಲಿ ಸಾಮರ್ಥ್ಯವನ್ನು ಪರಿವೀಕ್ಷಣೆ ನಡೆಸಲಾಗುವುದು. ಇದರಲ್ಲಿ ತಾಮ್ರಪತ್ರ ಇಡಲಾಗುತ್ತದೆ. ಅದರಲ್ಲಿರುವ ಉಲ್ಲೇಖದ ಬಗ್ಗೆ ಮುಂದೆ ನಿರ್ಧರಿಸಲಾಗುವುದು.
ಸುಮಾರು 300 ಕೋ.ರೂ. ವೆಚ್ಚದಲ್ಲಿ ಮಂದಿರ ನಿರ್ಮಿಸಲು, ಸುಮಾರು 20 ಎಕ್ರೆ ಸ್ಥಳವನ್ನು 1,000 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪ್ರತಿಯೊಬ್ಬ ಭಕ್ತರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಪ್ರತಿ ವ್ಯಕ್ತಿ ಕನಿಷ್ಠ 10 ರೂ., ಪ್ರತಿ ಮನೆಯಿಂದ ಕನಿಷ್ಠ 100 ರೂ. ಸಂಗ್ರಹಿಸುವ ಗುರಿ ಇದೆ. ಇದಕ್ಕಾಗಿಯೇ ದೇಶಾದ್ಯಂತ ವ್ಯಾಪಕ ಆಂದೋಲನವನ್ನು ನಡೆಸಲಾಗುವುದು.
ಈಗ ಕೋವಿಡ್ 19 ಸೋಂಕಿನ ಕಾರಣದಿಂದ ಭೂಮಿಪೂಜೆಯನ್ನು ನಡೆಸುವುದು ಕಷ್ಟಸಾಧ್ಯ. ಆದ್ದರಿಂದ ಇದರ ಬಗ್ಗೆಮುಂದೆ ನಿರ್ಣಯ ತಳೆಯಲಾಗುವುದು. 15 ದಿನ ಮುಂಚಿತವಾಗಿ ಭೂಮಿ ಪೂಜನ ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.