ಉಡುಪಿ: ರಾಜಕಾರಣಿಗಳು ಹೇಗಿರಬೇಕು? ಸ್ವರ್ಗದಲ್ಲಿ ಪುಣ್ಯಶಾಲಿಗಳು ಎಷ್ಟು ದಿನ ಇರಬಹುದು? ಪರಿಸರ ಕಾಳಜಿ ಎಷ್ಟು ಮುಖ್ಯ… ಹೀಗೆ ಪುಂಖಾನುಪುಂಖವಾಗಿ ಪೇಜಾವರ ಶ್ರೀಗಳು ತಮ್ಮ ಕೊನೆಯ ಉಪನ್ಯಾಸದಲ್ಲಿ ನುಡಿದಿದ್ದರು. ಸ್ಥಳ ತಾವೇ ನಿರ್ಮಿಸಿದ್ದ ರಾಜಾಂಗಣ. ದಿನ ಡಿ. 19ರ ರಾತ್ರಿ. ಈ ಉಪನ್ಯಾಸವನ್ನು ಕೇಳಿದ್ದವರು ಅವರು ಹರಿಪಾದ ಸೇರಿದ ಬಳಿಕ, ತೀವ್ರ ಜ್ವರದಲ್ಲಿಯೂ ಅವರಿಂದ ಯಾವುದೋ ಒಂದು ಅವ್ಯಕ್ತ ಶಕ್ತಿ ಈ ಮಾತುಗಳನ್ನು ನುಡಿಸಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಗಸ್ತ್ಯರ ಪತ್ನಿ ಲೋಪಾಮುದ್ರೆಗೆ ಸ್ತ್ರೀ ಸಹಜವಾದ ಚಿನ್ನಾಭರಣ, ಸೀರೆ ಇತ್ಯಾದಿಗಳನ್ನು ತೊಟ್ಟು ಸಂಭ್ರಮಿಸಬೇಕೆಂಬ ಇಚ್ಛೆಯಾಯಿತು. ಆಗ ಅಗಸ್ತ್ಯರು ರಾಜನ ಬಳಿ ಹೋಗಿ, “ನಿಮ್ಮ ಬಜೆಟ್‌ನಲ್ಲಿ ಏನಾದರೂ ಉಳಿದಿದ್ದರೆ ಸ್ವಲ್ಪ ಹಣ ಕೊಡಿ. ಜನರ ಕಲ್ಯಾಣಕ್ಕಾಗಿ ಇರಿಸಿದ ಹಣವನ್ನು ಕಡಿತ ಮಾಡಿ ಕೊಡುವುದು ಬೇಡ’ ಎಂದರು. ರಾಜನ ಬಜೆಟ್‌ನ ಆಯ-ವ್ಯಯ ಸರಿಯಾಗಿತ್ತು. ಉಳಿಕೆ ಹಣವಿರಲಿಲ್ಲ. ಮೂರ್‍ನಾಲ್ಕು ರಾಜರ ಬಳಿ ಹೋದಾಗಲೂ ಇದೇ ಕಥೆಯಾಗಿತ್ತು. ದರೋಡೆಕೋರರು ಜನರನ್ನು ಕೊಂದು ಧನಸಂಪತ್ತನ್ನು ಸಂಗ್ರಹಿಸಿದ್ದಾರೆ. ಇವರನ್ನು ನಿಮ್ಮ ತಪಃಶಕ್ತಿಯಿಂದ ನಿಗ್ರಹಿಸಿ ನನ್ನ ಬೇಡಿಕೆ ಈಡೇರಿಸಿ ಎಂಬುದು ಪತ್ನಿಯ ಸಲಹೆ. ಅಗಸ್ತ್ಯರು ಇಲ್ವಲ-ವಾತಾಪಿ ಎಂಬ ಲೋಕಕಂಟಕರನ್ನು ಸಂಹರಿಸಿ ಪತ್ನಿಯ ಬೇಡಿಕೆಗೆ ಎಷ್ಟು ಹಣ ಬೇಕೋ ಅಷ್ಟನ್ನು ಇಟ್ಟುಕೊಂಡು ಉಳಿದುದನ್ನು ಜನರಿಗೆ ದಾನ ಮಾಡಿದರು. ಈಗ ಗಂಡ ಭ್ರಷ್ಟನಾಗಲು ಪತ್ನಿ ಕಾರಣಳಾಗುತ್ತಿದ್ದಾರೆ. ಅಕ್ರಮ ಸಂಪತ್ತೂ ಬೇಡ, ಜನರ ಹಣವೂ ಬೇಡ ಎಂಬ ಶಿಸ್ತಿಗೆ ನಾವು ಒಳಪಡಬೇಕು – ಇದು ಉಪನ್ಯಾಸದಲ್ಲಿ ಶ್ರೀ ಪೇಜಾವರರು ಹೇಳಿದ್ದು.
ಮಹಾಭಾರತದಲ್ಲಿ ವಿದುರನ ಸಲಹೆಯಂತೆ ಧೃತರಾಷ್ಟ್ರ ಕಾಡಿಗೆ ಹೋಗಲು ನಿರ್ಧರಿಸಿದ. ಹೋಗುವಾಗ ಮಕ್ಕಳು ಬಹಳಷ್ಟು ಕೆಟ್ಟ ಕೆಲಸ ಮಾಡಿದ ಕಾರಣ ಅವರ ಹೆಸರಿನಲ್ಲಿ ದಾನಧರ್ಮ ಮಾಡಿ ಹೋಗಬೇಕೆಂದು ನಿರ್ಧರಿಸಿದ. ಧರ್ಮರಾಯ ಹಣ ಮಂಜೂರು ಮಾಡಲು ಒಪ್ಪಿದರೂ ಭೀಮಸೇನ ವಿರೋಧಿಸಿದ. ದುರ್ಯೋಧನ ಜನ ಹತ್ಯೆಗೆ ಕಾರಣನಾದವ. ಅವನ ಕಲ್ಯಾಣಕ್ಕೆ ಸರಕಾರದ ಹಣ ಮಂಜೂರು ಮಾಡಲು ಒಪ್ಪುವುದಿಲ್ಲ ಎಂದ. “ಪ್ರಜೆಗಳ ಹಣವನ್ನು ಹೀಗೆ ಖರ್ಚು ಮಾಡುವುದು ತರವಲ್ಲ. ಬೇಕಾದರೆ ವೈಯಕ್ತಿಕ ಹಣವನ್ನು ಖರ್ಚು ಮಾಡಿ’ ಇದು ಭೀಮನ ನೀತಿ.
ಇಂದಿನ ರಾಜಕಾರಣಿಗಳಿಗೆ ಸ್ವಂತದ ಹಣ ಯಾವುದು, ಸರಕಾರದ ಹಣ ಯಾವುದು ಎಂಬ ಪರಿಜ್ಞಾನ ಇರುವುದಿಲ್ಲ. ಸರಕಾರದ ಹಣವನ್ನು ಸ್ವಂತದ ಹಣದಂತೆ ಖರ್ಚು ಮಾಡುತ್ತಾರೆ. ಇದು ತರವಲ್ಲ ಎಂದು ಮಹಾಭಾರತ ಸಾರುತ್ತಿದೆ – ಶ್ರೀಪಾದರ ವಾಗ್ಸರಣಿ ಹೀಗಿತ್ತು.
ಇಂತಹ ಅನೇಕ ಉಪಾಖ್ಯಾನಗಳ ಮೂಲಕ ಮಹಾಭಾರತ ರಾಜಕಾರಣಿಗಳು, ಸಾಮಾನ್ಯ ಜನರಿಗೆ ಬೇಕಾದ ಸಂದೇಶಗಳನ್ನು ನೀಡಿದೆ. ಮಹಾಭಾರತ ಗ್ರಂಥ ನಮ್ಮೊಳಗೆ ಇರುವ ಭಿನ್ನ ಭಿನ್ನ ಕೆಟ್ಟ ಮತ್ತು ಉತ್ತಮ ವ್ಯಕ್ತಿತ್ವಗಳನ್ನು ನಾನಾ ಪಾತ್ರಗಳ ಮೂಲಕ ಕೊಟ್ಟಿದೆ ಎಂದು ತಮ್ಮ ಕೊನೆಯ ಉಪನ್ಯಾಸದಲ್ಲಿ ಪೇಜಾವರ ಶ್ರೀಗಳು ತಿಳಿಸಿದ್ದರು.