Advertisement

ತಮ್ಮ ನೆಚ್ಚಿನ ವಿದ್ಯಾಪೀಠದ ಆವರಣದಲ್ಲಿ ಬೃಂದಾವನಸ್ಥರಾದ ವಿಶ್ವೇಶತೀರ್ಥರು

09:58 AM Dec 30, 2019 | Hari Prasad |

ಬೆಂಗಳೂರು: ಇಂದು ಉಡುಪಿ ಪೇಜಾವರ ಮಠದಲ್ಲಿ ಹರಿಪಾದವನ್ನು ಸೇರಿದ ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿ ಪಂಚಪರ್ಯಾಯ ಸಾಧಕ ಶ್ರೀ ವಿಶ್ವೇಶತೀರ್ಥರನ್ನು ಅವರ ಅಂತಿಮ ಇಚ್ಛೆಯಂತೆ ಶ್ರೀಗಳ ನೆಚ್ಚಿನ ವಿದ್ಯಾಪೀಠದ ಆವರಣದಲ್ಲಿ ಬೃಂದಾವನಸ್ಥರನ್ನಾಗಿಸಲಾಯಿತು.

Advertisement

ಇದಕ್ಕೂ ಮೊದಲು ಉಡುಪಿಯ ಅಜ್ಜರಕಾಡಿನಲ್ಲಿ ಸಾರ್ವಜನಿಕ ದರ್ಶನ ಮುಗಿದ ಬಳಿಕ ಸೇನಾ ಹೆಲಿಕಾಫ್ಟರ್ ಮೂಲಕ ಶ್ರೀಗಳ ದೇಹವನ್ನು ಬೆಂಗಳೂರಿಗೆ ತರಲಾಯಿತು. ಮತ್ತು ಇಲ್ಲಿ ಬಸವನಗುಡಿಯಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಬಳಿಕ ಅಲ್ಲಿಂದ ಶ್ರೀಗಳನ್ನು ತೆರೆದ ವಾಹನದಲ್ಲಿ ವಿದ್ಯಾಪೀಠ ಆವರಣಕ್ಕೆ ತಂದು ಇಲ್ಲಿ ಶ್ರೀಗಳ ಬೃಂದಾವನಕ್ಕೆಂದು ಮೊದಲೇ ನಿಗದಿಪಡಿಸಿದ್ದ ಜಾಗದಲ್ಲಿ ಸನ್ಯಾಸಿ ಪದ್ಧತಿಯಂತೆ ಅಗತ್ಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಇದಕ್ಕೂ ಮೊದಲು ಶ್ರೀಗಳಿಗೆ ಸರಕಾರಿ ಗೌರವವನ್ನು ಸಲ್ಲಿಸಲಾಯಿತು.


ಇವೆಲ್ಲಾ ಕಾರ್ಯಕ್ರಮಗಳು ನಡೆದ ಬಳಿಕ ವೈದಿಕ ವಿಧಿ ವಿಧಾನಗಳಿಗೆ ಅನುಸಾರವಾಗಿ ಶ್ರೀಗಳನ್ನು ಪದ್ಮಾಸನ ಭಂಗಿಯಲ್ಲಿ ಬೃಂದಾವನದಲ್ಲಿ ಕುಳ್ಳಿರಿಸಿ ಬಳಿಕ ಶ್ರೀಗಳು ನಿತ್ಯ ಜಪ-ತಪ, ಪೂಜಾ ಕಾರ್ಯಗಳಿಗೆ ಬಳಸುತ್ತಿದ್ದ ವಿಷ್ಣು ಸಾಲಿಗ್ರಾಮ, ಗಿಂಡಿ, ತುಳಸಿ ಮಾಲೆ, ಪೂಜಾ ಸಾಮಾಗ್ರಿಗಳನ್ನು ಶ್ರೀಗಳ ದೇಹದ ಜೊತೆಯಲ್ಲೇ ಇರಿಸಿ ಸಾಸಿವೆ, ಉಪ್ಪು ಹಾಗೂ ಹತ್ತಿಯಲ್ಲಿ  ಬೃಂದಾವನವನ್ನು ಮುಚ್ಚಲಾಯಿತು.

ವಿದ್ಯಾಪೀಠದ ದುಃಖತಪ್ತ ವಿದ್ಯಾರ್ಥಿಗಳು, ಬೋಧಕರು, ಮಠದ ಹಾಗೂ ಶ್ರೀಗಳ ಭಕ್ತವೃಂದ ಸಹಿತ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಭಾರವಾದ ಹೃದಯದಿಂದ ‘ಯತಿ ಶ್ರೇಷ್ಠ’ರಿಗೆ ಅಶ್ರುಭರಿತ ನಮನಗಳನ್ನು ಸಲ್ಲಿಸಿದರು. ಇದರೊಂದಿಗೆ ಆಚಾರ್ಯ ಮಧ್ವರ ಯತಿ ಪರಂಪರೆಯಲ್ಲಿ ಬಂದ ಯತಿ ಶ್ರೇಷ್ಠರೊಬ್ಬರ ಮಹಾಪ್ರಸ್ಥಾನದೊಂದಿಗೆ ಉಡುಪಿ ಅಷ್ಟಮಠಗಳ ಇತಿಹಾಸದಲ್ಲಿ ಮಹಾಯತಿ ಪರಂಪರೆಯ ಯುಗವೊಂದು ಅಂತ್ಯಗೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next