Advertisement

ವೃಂದಾವನಸ್ತ ಶ್ರೀಗಳ ಸ್ಮರಣಾರ್ಥ ವಿದ್ಯಾಪೀಠದಲ್ಲಿ ಸವಿತೃಯಾಗ

09:48 AM Jan 01, 2020 | Team Udayavani |

ಬೆಂಗಳೂರು: ವೃಂದಾವನಸ್ತರಾದ ಪೇಜಾವರ ಶ್ರೀ ವಿಶ್ವೇಶತೀರ್ಥರ ಸ್ಮರಣೆಯಲ್ಲಿ ಮಂಗಳವಾರ ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಸವಿತೃಯಾಗ ನೆರವೇರಿತು.

Advertisement

ರವಿವಾರದಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳ ಜತೆಗೆ ಭಜನೆ, ಪಾರಾಯಣ, ಶ್ಲೋಕ ಪಠಣ ನಿರಂತರವಾಗಿ ನಡೆಯು ತ್ತಲೇ ಇದೆ. ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು, ಶಿಷ್ಯವೃಂದ ಸೇರಿ ಅಹೋರಾತ್ರಿ ಶಾಸ್ತ್ರ, ಪಾರಾಯಣ, ಭಜನೆಯನ್ನು ಶ್ರೀಗಳ ವೃಂದಾವನದ ಎದುರು ನಡೆಸುತ್ತಿದ್ದಾರೆ.

ಮಂಗಳವಾರ ಸಂಜೆ ಸಾಮಾನ್ಯ ಜಿಜ್ಞಾಸುಗಳಿಗೆ ಶಾಸ್ತ್ರಚರ್ಚೆ, ಸುಧಾ ಉಪನ್ಯಾಸ ಮತ್ತು ಭಗವತ್‌ ಗೀತಾ ಪ್ರವಚನ ನಡೆಯಿತು. ವೃಂದಾವನಕ್ಕೆ ಹಸ್ತೋದಕ, ಸಾರ್ವಜನಿಕರ ಅನ್ನಸಂತರ್ಪಣೆ ನಡೆಯಿತು.

ಮಂಗಳವಾರವೂ ಹರಿದುಬಂದ ಭಕ್ತಸಾಗರ
ಪೇಜಾವರ ಶ್ರೀಗಳ ವೃಂದಾವನ ವೀಕ್ಷಣೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಶಿಷ್ಯರು ಅಪಾರ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದರು. ಶ್ರೀಗಳ ವೃಂದಾವನ ವೀಕ್ಷಿಸಲು ಬಂದವರು ಕೂಡ ಸ್ವಲ್ಪ ಕಾಲ ಮಂತ್ರಪಠಣ ಮಾಡುತ್ತಿದ್ದುದು ವಿಶೇಷವಾಗಿತ್ತು. ಭಕ್ತ ವೃಂದ ಶ್ರೀಗಳ ವೃಂದಾವನಕ್ಕೆ ಹೂ, ತುಳಸಿಮಾಲೆ ಮತ್ತು ಹೂಮಾಲೆಗಳನ್ನು ಅರ್ಪಿಸಿದರು.

ವಿಶೇಷ ಆರಾಧನೆ
ವೃಂದಾವನಸ್ತರಾದ ಪೇಜಾವರ ಶ್ರೀಗಳ ಆರಾಧನೆ ಕಾರ್ಯಕ್ರಮ ಜ.29ರಂದು ನಡೆಯಲಿದೆ. ಶ್ರೀಗಳು ವೃಂದಾವನಸ್ತರಾದ 12ನೇ ದಿನ ಮಾಧ್ವ ಪೀಠಾ ಧಿಪತಿಗಳನ್ನು ಆಹ್ವಾನಿಸಲಾಗುತ್ತದೆ. 24 ವಿದ್ವಾಂಸರಿಂದ ವಿಶೇಷವಾಗಿ ಭಗವಂತನ ಆರಾಧನೆ ನಡೆಯಲಿದೆ. ಇದು ಆರಾಧನೆ ಒಂದು ಕ್ರಮವಾಗಿದ್ದು, ಭಗವಂತನ 24 ಮೂರ್ತಿಗಳನ್ನು ಅಲ್ಲಿ ಆವಾಹನೆ ಮಾಡಿ ವಿಶೇಷವಾದ ಸತ್ಕಾರ ನಡೆಯಲಿದೆ.

Advertisement

ಭಕ್ತರಿಗೆ ಪಾದುಕೆ ನೀಡುವ ವ್ಯವಸ್ಥೆ
ವೃಂದಾವನಸ್ತರಾದ ಪೇಜಾವರ ಶ್ರೀಗಳ ಪಾದುಕೆಯನ್ನು ಭಕ್ತರ ಅಪೇಕ್ಷೆಯಂತೆ ನೀಡುವ ವ್ಯವಸ್ಥೆಯನ್ನು ಮಾಡಲಿದ್ದೇವೆ. ಅತಿ ಶೀಘ್ರದಲ್ಲಿಯೇ ಮರದ ಪಾದುಕೆಗಳನ್ನು ಸಿದ್ಧಪಡಿಸಲಿದ್ದೇವೆ. ಸೇವಾ ರಶೀದಿ ಮಾಡಿ, ನಿರ್ದಿಷ್ಟ ಹಣ ಪಾವತಿಸಿ ಭಕ್ತರು ವೃಂದಾವನದಲ್ಲಿ ಪೂಜೆ, ಮಂತ್ರಾಕ್ಷತೆಯ ಅನಂತರ ಪಾದುಕೆಯನ್ನು ತಮ್ಮ ಮನೆಗೆ ಕೊಂಡೊಯ್ಯಬಹುದಾದ ವ್ಯವಸ್ಥೆ ಮಾಡಲಿದ್ದೇವೆ. ಎಷ್ಟು ಸಾಧ್ಯವಾಗುತ್ತದೆ ಅಷ್ಟನ್ನು ಸಿದ್ಧಪಡಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ವಿದ್ವಾಂಸರೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next