ಬೆಂಗಳೂರು: ವಿಶ್ವಹಿಂದೂ ಪರಿಷತ್ ಅಂತಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ್ ಕುಮಾರ್ ಅವರು ರವಿವಾರ ನಗರದ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಭೇಟಿ ನೀಡಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಜತೆ ಸಮಾಲೋಚನೆ ನಡೆಸಿದರು.
ಅವರು ಮತಾಂತರ ವಿರುದ್ಧ ಆಂದೋಲನ, ಹಿಂದೂ ಧರ್ಮಕ್ಕೆ ಎದುರಾಗಿರುವ ಸಂಕಷ್ಟ ಸಹಿತ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.
ದೇಶದಲ್ಲಿ ಕ್ರೈಸ್ತರಿಂದ ಮತಾಂತರ ಚಟುವಟಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಇದರ ವಿರುದ್ಧ ವಿಶ್ವಹಿಂದೂ ಪರಿಷತ್ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಸಜ್ಜಾಗಿದೆ. ಇದರ ನೇತ್ವತ್ವವನ್ನು ಮಠಾಧೀಶರು, ಸಾಧು ಸಂತರು ಹಾಗೂ ಧರ್ಮಾಧಿಕಾರಿಗಳು ವಹಿಸಬೇಕು ಎಂದು ಆಲೋಕ್ ಕುಮಾರ್ ಮನವಿ ಮಾಡಿದರು.
ಶ್ರೀವಿಶ್ವೇಶತೀರ್ಥ ಶ್ರೀಪಾದರು ಕಾಲಕಾಲಕ್ಕೆ ಹಿಂದೂ ಸಮಾಜಕ್ಕೆ ಎದುರಾಗಿದ್ದ ಸವಾಲುಗಳ ಸಂದರ್ಭದಲ್ಲಿ ಸ್ವಯಂ ಸ್ಫೂರ್ತಿಯಿಂದ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡಿದ್ದರು. ಈಗ ಅವರ ಶಿಷ್ಯರಾದ ತಾವು ಆ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಬೇಕು ಎಂದು ಶ್ರೀಗಳಲ್ಲಿ ವಿನಂತಿಸಿದರು.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್: ಸಿದ್ದರಾಮಯ್ಯ
ಇದಕ್ಕೆ ಪೇಜಾವರ ಶ್ರೀಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂದರ್ಭದಲ್ಲಿ ಆಲೋಕ್ ಕುಮಾರ್ ಅವರನ್ನು ಶ್ರೀಗಳು ಆಶೀರ್ವದಿಸಿದರು. ವಿಶ್ವಹಿಂದು ಪರಿಷತ್ತಿನ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಕೇಶವ ಹೆಗಡೆ, ಬಸವರಾಜ್ ಸಹಿತ ಮತ್ತಿತತರು ಉಪಸ್ಥಿತರಿದ್ದರು.