ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದನವಿದೆ. ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ. ಶ್ವಾಸಕೋಶ, ಉಸಿರಾಟದ ಸಮಸ್ಯೆ ಹೊರತು ಬೇರಾವುದೇ ಸಮಸ್ಯೆಗಳಿಲ್ಲ. ಇವು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ತಂಡದವರ ಹೇಳಿಕೆಯ ಪ್ರಮುಖ ಅಂಶ.
ಬೆಂಗಳೂರು ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞ ಡಾ| ರಾಜೇಶ ಶೆಟ್ಟಿ ಮತ್ತು ಶ್ವಾಸಕೋಶದ ತಜ್ಞ ಡಾ| ಸತ್ಯನಾರಾಯಣ, ಮಣಿಪಾಲ ಕೆಎಂಸಿ ಡೀನ್ ಡಾ| ಶರತ್ ರಾವ್, ಮಣಿಪಾಲದ ಮೆಡಿಸಿನ್ ವಿಭಾಗದ ಡಾ| ಮಂಜುನಾಥ ಹಂದೆ, ತುರ್ತು ಚಿಕಿತ್ಸಾ ವಿಭಾಗದ ಡಾ| ವಿಶಾಲ ಶ್ಯಾನುಭಾಗ್ ಅವರ ಉಪಸ್ಥಿತಿ ಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಅವರು ಚಿಕಿತ್ಸೆ ಕುರಿತು ಮಾಹಿತಿಗಳನ್ನು ನೀಡಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸ್ವಾಮೀಜಿಯವರಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ. ಭಾನುವಾರ ಬೆಂಗಳೂರಿನ ಇಬ್ಬರು ತಜ್ಞರು ಆಗಮಿಸಿ ಮಣಿಪಾಲ ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ. ದಿಲ್ಲಿಯ ಏಮ್ಸ್ ವೈದ್ಯರು ಸಂಪರ್ಕದಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರಿಗೆ ಪ್ರತಿ ಗಂಟೆಗೆ ಮಾಹಿತಿ ನೀಡುತ್ತಿದ್ದೇವೆ. ಕೇಂದ್ರದ ಆರೋಗ್ಯ ಸಚಿವ ಡಾ| ಹರ್ಷವರ್ಧನ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಪರ್ಕದಲ್ಲಿದ್ದು ಆರೋಗ್ಯ ಇಲಾಖೆಯಿಂದ ಯಾವುದೇ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ನ್ಯುಮೋನಿಯಕ್ಕೆ 6 ವಾರಗಳ ಚಿಕಿತ್ಸೆ: ಸಾಮಾನ್ಯವಾಗಿ ನ್ಯುಮೋನಿಯ ಕಾಯಿಲೆಗೆ ಆರು ವಾರಗಳ ಚಿಕಿತ್ಸೆ ಅಗತ್ಯ. ಆಸ್ಪತ್ರೆಗೆ ಸೇರುವ ನಾಲ್ಕೈದು ದಿನಗಳ ಮೊದಲೇ ಶ್ರೀಗಳಿಗೆ ನ್ಯುಮೋನಿಯ ಜ್ವರ ಬಂದಿತ್ತು. ಶ್ವಾಸಕೋಶಕ್ಕೆ ಸೋಂಕು ತಗುಲಿದೆ. ಸೋಮವಾರ ರಾತ್ರಿ ನಡೆಸಿದ ಎಂಆರ್‌ಐ ಸ್ಕ್ಯಾನ್‌ನಲ್ಲಿ ಗಾಬರಿ ಹುಟ್ಟಿಸುವ ಅಂಶಗಳೇನೂ ಇಲ್ಲ. ಕಫ ಕರಗುತ್ತಾ ಇದೆ ಎಂದು ಡಾ| ಸತ್ಯನಾರಾಯಣ ಹೇಳಿದರು.
ನಿಧಾನವಾಗಿ ಸ್ಪಂದನೆ: ಆಸ್ಪತ್ರೆಗೆ ಸೇರುವಾಗ ಬೇರೆ ಸಮಸ್ಯೆಗಳಿ ದ್ದವಾದರೂ ಈಗ ಶ್ವಾಸಕೋಶ ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇಲ್ಲ. 90 ವರ್ಷ ವಯಸ್ಸಾದ ಕಾರಣ ನಿಧಾನಗತಿಯಲ್ಲಿ ಗುಣಮುಖ ರಾಗಬೇಕಾಗುತ್ತದೆ. ನ್ಯುಮೋನಿಯದ ಬ್ಯಾಕ್ಟೀರಿಯಾ ಪ್ರವೇಶ ಮಾಡಿದಾಗ ಪ್ರತಿಬ್ಯಾಕ್ಟೀರಿಯಾವನ್ನು ದೇಹ ಉತ್ಪಾದಿಸುತ್ತದೆ. ಇವೆರಡು ಬ್ಯಾಕ್ಟೀರಿಯಾಗಳ ಯುದ್ಧಭೂಮಿ ಶ್ವಾಸಕೋಶ. ಪ್ರಜ್ಞೆಯಲ್ಲೂ ಸುಧಾರಣೆ ಇದ್ದು, ಶ್ರೀಗಳು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಡಾ| ರಾಜೇಶ ಶೆಟ್ಟಿ ಮತ್ತು ಡಾ| ಸತ್ಯನಾರಾಯಣ ತಿಳಿಸಿದರು.