ಉಡುಪಿ: ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಅಯೋಧ್ಯಾ ರಾಮಜನ್ಮ ಭೂಮಿ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ವಿವಾದಿತ ಜಮೀನು ರಾಮಲಲ್ಲಾ ಪಾಲಾಗಿದೆ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸರ್ವೋಚ್ಛ ನ್ಯಾಯಾಲಯದ ಈ ಅಂತಿಮ ತೀರ್ಪನ್ನು ಸ್ವಾಗತಿಸಿದ್ದು, ಇದು ನಿರೀಕ್ಷಿತವಾಗಿದ್ದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರು ಅಂತಿಮ ತೀರ್ಪು ಓದುತ್ತಿದ್ದಂತೆ ಮಠದ ಹಾಲ್ ನಲ್ಲಿ ಮುಸ್ಲಿಂ ಸೌಹಾರ್ಧ ಸಮಿತಿ ಸದಸ್ಯರೊಂದಿಗೆ ಪೇಜಾವರ ಸ್ವಾಮೀಜಿಗಳು ಖಾಸಗಿ ಸುದ್ದಿ ವಾಹಿನಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಿದರು.
ತೀರ್ಪಿನ ನಂತರ ಮಾತನಾಡಿದ ಸ್ವಾಮಿಗಳು, ಮುಸ್ಲಿಮರಿಗೆ ಐದು ಎಕರೆ ಜಾಗ ನೀಡಿದ್ದು ಸ್ವಾಗತ ಮಾಡುತ್ತೇವೆ. ಮಂದಿರ ನಿರ್ಮಾಣಕ್ಕೆ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ ಎಂದ ಸ್ವಾಮೀಜಿಗಳು, ಶತಮಾನಗಳಷ್ಟು ಹಳೆಯ ವಿವಾದ ಬಗೆ ಹರಿದಿರುವುದು ಸಂತಸ ಮೂಡಿಸಿದೆ ಎಂದರು.
ಮುಸ್ಲಿಂ ಸೌಹಾರ್ದ ಸಮಿತಿ ಸದಸ್ಯರು ಕೂಡಾ ಈ ತೀರ್ಪನ್ನು ಸ್ವಾಗತಿಸಿದ್ದು, ಇದು ಯಾರ ಸೋಲು ಯಾರ ಗೆಲುವು ಎಂದು ಭಾವಿಸಬಾರದು. ಎಲ್ಲರೂ ಶಾಂತಿಯಿಂದ ಇರಬೇಕು ಎಂದರು.
1980ರಲ್ಲಿ ಪೇಜಾವರ ಶ್ರೀಗಳ ಮೂರನೇ ಪರ್ಯಾಯದಲ್ಲಿ ಧರ್ಮ ಸಂಸದ್ ನಡೆಸಲಾಗಿತ್ತು. ‘ತಾಲಾ ಖೋಲೋ’ ಎಂಬ ಆಂದೋಲನ ನಡೆಸಲಾಗಿತ್ತು. ಇದಾದ ನಂತರ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ನೀಡಿದ್ದರು.
2017ರಲ್ಲಿ ಶ್ರೀಗಳ ಐದನೇ ಪರ್ಯಾಯದ ಸಮಯದಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದ್ದರು.
ನಾಳೆ ದೆಹಲಿಗೆ
ಪೇಜಾವರ ಸ್ವಾಮಿಜೀಗಳು ರವಿವಾರ ದೆಹಲಿಯಲ್ಲಿ ನಡೆಯಲಿರುವ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.