ಕೆ.ಆರ್.ಪುರ: ಸಮೀಪದ ಹೆಣ್ಣೂರಿನ ಕಾಚರಕನಹಳ್ಳಿಯಲ್ಲಿ ಶ್ರೀàರಾಮ ವರ್ಧಿನಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 62 ಅಡಿ ಎತ್ತರದ ಏಕಶಿಲಾ ಹನುಮಾನ್ ವಿಗ್ರಹದ ಪೂರ್ವಾರ್ಧ ಕೆತ್ತನೆಯ ಪ್ರಾರಂಭೋತ್ಸವಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
ಸಮಾರಂಭ ಉದ್ಘಾಟಿಸಿದ ನಂತರ ಮಾತನಾಡಿದ ಪೇಜಾವರ ಶ್ರೀಗಳು, ಟ್ರಸ್ಟ್ ವತಿಯಿಂದ ದೇಶದ ಅತಿ ಎತ್ತರದ ಹನುಮಾನ್ ಮೂರ್ತಿ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀರಾಮನ ಭಂಟ ಹನುಮಂತ, ಲಕ್ಷ್ಮಣನ ಪ್ರಾಣ ಉಳಿಸಲು ತನ್ನ ಎಡಗೈನಲ್ಲಿ ಸಂಜೀವಿನಿ ಪರ್ವತವನ್ನೇ ಹೊತ್ತು ತಂದಿದ್ದರಿಂದ ಆತನ ಬಗ್ಗೆ ರಾಮನಿಗೆ ವಿಶೇಷ ಕಾಳಜಿ ಇತ್ತು. ಹನುಮಾನ್ ಶಕ್ತಿ ಎಂದರೆ ಅನ್ಯಾಯದ ವಿರುದ್ಧದ ಹೋರಾಟ. ಈ ಹನುಮಾನ್ ಶಕ್ತಿಯನ್ನು ಇಂದಿನ ಯುವಕರು ರೂಢಿಸಿಕೊಳ್ಳಬೇಕಾಗಿದೆ ಎಂದರು.
ಮೂವತ್ತು ವರ್ಷಗಳ ಹಿಂದೆ ಆಗಿನ ಸರ್ಕಾರ ಈ ಸ್ಥಳದಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಲು ಮುಂದಾದಾಗ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗಿತ್ತು. ಈ ಪವಿತ್ರ ಸ್ಥಳದಲ್ಲಿ ಚೋಳರ ಕಾಲದಲ್ಲಿ ಸುಂದರವಾದ ಆಂಜನೇಯನ ದೇವಸ್ಥಾನ ನಿರ್ಮಾಣವಾಗಿದೆ. ದೇವಾಲಯಕ್ಕೆ ನಾನೂರು ವರ್ಷಗಳ ಇತಿಹಾಸವಿದೆ. ಈ ಬೃಹತ್ ಮೂರ್ತಿಯ ಕೆತ್ತನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಕೆತ್ತನೆ ಕಾರ್ಯ ಮುಗಿದ ನಂತರ ಮತ್ತೆ ಭೇಟಿ ನೀಡುವುದಾಗಿ ತಿಳಿಸಿದರು.
1988ರಲ್ಲಿ ಮೊದಲ ಬಾರಿ ಈ ಸ್ಥಳದಲ್ಲಿ ಮೂಲ ಹನುಮಾನ್ ಮೂರ್ತಿ ಕಾಣಿಸಿಕೊಂಡಿತ್ತು. 25 ವರ್ಷಗಳ ಹಿಂದೆ ಹನುಮಾನ್ ಕುರುಹು ಪತ್ತೆ ಹಚ್ಚಿ ಇದೆ ಸ್ಥಳದಲ್ಲಿ ಹನುಮಾನ್ ಮೂರ್ತಿ ಪ್ರತಿಷ್ಠಾಪಿಸಲು ಟ್ರಸ್ಟ್‌ನ ಪಧಾಧಿಕಾರಿಗಳು ಹಾಗೂ 18 ಗ್ರಾಮಗಳ ಮುಖಂಡರ ತಿರ್ಮಾನಿಸಿದ್ದರು. ಅದರಂತೆ ಕೋಲಾರ ಜಿಲ್ಲೆಯ ನರಸಾಪುರದಲ್ಲಿ 1400 ಟನ್ ತೂಕದ ಏಕಾಶಿಲೆಯಲ್ಲಿ 750 ಟನ್ ತೂಕ, 62 ಅಡಿ ಎತ್ತರದ ಹನುಮಾನ್ ಮೂರ್ತಿಯನ್ನು ಕೆತ್ತಲಾಗಿದೆ.
ಕೆತ್ತನೆಯ ಅರ್ಧ ಭಾಗ ಮುಗಿದಿದ್ದು, ಪೂರ್ವಾರ್ಧ ಭಾಗದ ಕೆತ್ತನೆ ಇಂದಿನಿಂದ ಆರಂಭವಾಗಿದೆ. 30×60 ಅಡಿ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀರಾಮ ವರ್ಧಿನಿ ಟ್ರಸ್ಟ್ ಅಧ್ಯಕ್ಷರು ತಿಳಿಸಿದರು. ಈ ವೇಳೆ ಅರಣ್ಯ ಸಚಿವ ಆರ್.ಶಂಕರ್, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಮೇಯರ್ ಸಂಪತ್‌ರಾಜ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.