Advertisement
ಹವಾಮಾನ ಬದಲಾದಂತೆ ಕಾಲುಗಳ ಆರೈಕೆಯಲ್ಲೂ ಬದಲಾವಣೆ ಮಾಡುತ್ತಿರಬೇಕು. ಚಳಿಗಾಲದ ಹವಾಮಾನ ಪರಿಸ್ಥಿತಿಯ ಕಾರಣ ಕಾಲುಗಳು ಒರಟು ಒರಟಾಗಿ ಒಣಗಿ, ಶುಷ್ಕ ಚರ್ಮಕ್ಕೆ ಕಾರಣವಾಗುತ್ತದೆ. ಅಂತಹ ಪಾದಗಳನ್ನು ಸುಂದರವಾಗಿಸಲು ಆರೈಕೆ ಅಗತ್ಯ.
Related Articles
Advertisement
ಫಿಶ್ ಪೆಡಿಕ್ಯೂರ್:
ಈ ಪೆಡಿಕ್ಯೂರ್ ನಲ್ಲಿ ಮೀನಿನ ತೊಟ್ಟಿಗೆ ಕಾಲನ್ನು ಇಳಿ ಬಿಟ್ಟು ಕೂರಬೇಕು. ಮೀನುಗಳು ಕಾಲಿನಲ್ಲಿರುವ ಕೊಳೆಯನ್ನು ತಿಂದು ಸ್ವಚ್ಛಗೊಳಿಸಿ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಫ್ಲೋರಲ್ ಪೆಡಿಕ್ಯೂರ್:
ಈ ಪೆಡಿಕ್ಯೂರ್ ಮಾಡುವಾಗ ಕಾಲು ನೆನೆಸುವ ನೀರಿನಲ್ಲಿ ಹೂವನ್ನು ಕೂಡ ಹಾಕಲಾಗುತ್ತದೆ. ಹೂಗಳು ನಿಮ್ಮ ಪಾದವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ.
ಹಾಟ್ ವಾಟರ್ ಪೆಡಿಕ್ಯೂರ್:
ಬಕೆಟ್ ಗೆ ಹದವಾಗಿರುವ ಬಿಸಿ ನೀರನ್ನು ಹಾಕಿ ಅದಕ್ಕೆ ಉಪ್ಪು ಮತ್ತು ಸ್ವಲ್ಪ ಸುಗಂಧವಾಸನೆಯ ಎಣ್ಣೆ ಹಾಕಿ ಅದರಲ್ಲಿ ಕಾಲುಗಳನ್ನು 15 ನಿಮಿಷ ಇಡಿ. ನಂತರ ಕಾಲುಗಳನ್ನು ಸ್ಕ್ರಬ್ ಮಾಡಿ, ಉಗುರನ್ನು ನಿಂಬೆ ಹಣ್ಣಿನಿಂದ ತಿಕ್ಕಿದರೆ ಕಾಲುಗಳ ಅಂದ ಹೆಚ್ಚುತ್ತದೆ. ಕೈ ಬೆರಳಿಗೂ ಇದೇ ರೀತಿ ಮಾಡಬಹುದು.
ಆರ್ಮೋಥೆರಪಿ ಪೆಡಿಕ್ಯೂರ್:
ಈ ಪೆಡಿಕ್ಯೂರ್ ನಲ್ಲಿ ಆರ್ಮೋಥೆರಪಿಗೆ ಬಳಸುವ ಎಣ್ಣೆ ಮತ್ತು ಉಪ್ಪನ್ನು ಬಳಸಿ ಮಾಡಲಾಗುತ್ತದೆ. ಈ ಪೆಡಿಕ್ಯೂರ್ ಕೈ, ಕಾಲುಗಳ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆ್ಯಂಟಿ ಟ್ಯಾನ್ ಪೆಡಿಕ್ಯೂರ್:
ಬಿಸಿಲಿಗೆ ಹೋದರೆ ಮುಖ ಮಾತ್ರವಲ್ಲ ಕೈ, ಕಾಲುಗಳು ಕೂಡಾ ಕಪ್ಪಾಗುತ್ತದೆ. ಈ ಸನ್ ಟ್ಯಾನ್ ಹೋಗಲಾಡಿಸಲು ಈ ಆ್ಯಂಟಿ ಟ್ಯಾನ್ ಪೆಡಿಕ್ಯೂರ್ ಮಾಡಿಸಿಕೊಳ್ಳಲಾಗುತ್ತದೆ.
ಹಾಟ್ ಸ್ಟೋನ್ ಪೆಡಿಕ್ಯೂರ್:
ಈ ಪೆಡಿಕ್ಯೂರ್ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ. ಇದರಿಂದ ಸ್ನಾಯು ಸೆಳೆತ ಕಡಿಮೆಯಾಗುವುದು. ಸ್ನಾಯು ಸೆಳೆತ ಅನುಭವಿಸುವವರು ಈ ಹಾಟ್ ಸ್ಟೋನ್ ಪೆಡಿಕ್ಯೂರ್ ಮಾಡಿಸಬಹುದು.
ಪೆಡಿಕ್ಯೂರ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್, ಸಲೂನ್ ಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ನಮ್ಮ ಪಾದಗಳಿಗೆ ನಾವೇ ಹೇಗೆ ಪೆಡಿಕ್ಯೂರ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಪೆಡಿಕ್ಯೂರ್ ಮಾಡುವ ಮುನ್ನ ಪಾದದಲ್ಲಿರುವ ಉಗುರುಗಳನ್ನು ನೀಟಾಗಿ ಕತ್ತರಿಸಿ ಅಥವಾ ನಿಮಗಿಷ್ಟವಾಗುವ ಆಕಾರ ನೀಡಿ. ನೇಲ್ ಪಾಲಿಶ್ ರಿಮೂವರ್ ನ ಸಹಾಯದಿಂದ ಹಳೆಯ ನೇಲ್ ಪಾಲಿಶ್ ತೆಗೆಯಿರಿ. ಇದರಿಂದ ನಿಮ್ಮ ಉಗುರುಗಳು ಹೊಳೆಯುತ್ತವೆ.
ನಂತರ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಕಾಲ ನೆನಸಿ. ಶುದ್ಧವಾಗಿ ತೊಳೆದ ನಿಮ್ಮ ಪಾದಗಳನ್ನು 10 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರಿಂದ ನಿಮ್ಮ ಚರ್ಮ ಮೃದುವಾಗುವುದು ಮಾತ್ರವಲ್ಲದೇ ಒತ್ತಡದ ಕಾಲುಗಳಿಗೆ ವಿಶ್ರಾಂತಿ ನೀಡಿದಂತಾಗುತ್ತದೆ.
ಬೆಚ್ಚಗಿನ ನೀರಿನಿಂದ ತೆಗೆದ ಪಾದ ಈಗಾಗಲೇ ಮೃದುವಾಗಿರುತ್ತದೆ. ಈಗ ನಿಧಾನವಾಗಿ ಫೂಟ್ ಸ್ಕ್ರಬ್ ಮಾಡಬೇಕು. ಹೀಗೆ ಮಾಡುವುದರಿಂದ ಕಾಲಿನಲ್ಲಿ ಅಡಗಿರುವ ಕೊಳೆ ಶಮನವಾಗುವುದಲ್ಲದೇ ಉತ್ತಮವಾದ ಬಣ್ಣ ಹಾಗೂ ಸತ್ತ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ.
ಸ್ಕ್ರಬಿಂಗ್ ಮಾಡಿದ ಪಾದಗಳನ್ನು ಮತ್ತೊಮ್ಮೆ ಸ್ವಚ್ಛವಾಗಿ ತೊಳೆದು, ಟವೆಲ್ ನಿಂದ ಒರೆಸಿಕೊಳ್ಳಬೇಕು. ನಂತರ ಲೋಷನ್ ಅಥವಾ ಮಾಯಿಶ್ಚರೈಸರ್ ಸಹಾಯದಿಂದ ಕಾಲಿನ ಚರ್ಮ ಹಾಗೂ ಕಾಲ್ಬೆರಳನ್ನು ಮೃದುವಾಗಿ ಮಾಸಾಜ್ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಪಾದಗಳಿಗೆ ಸುಗಮವಾಗಿ ರಕ್ತ ಸಂಚಾರವಾಗುವುದಲ್ಲದೇ, ಹೆಚ್ಚು ಕಾಲ ಪಾದಗಳು ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ.
ಕಾಲ್ಬೆರಳಿನ ಅಂದ ಹೆಚ್ಚಿಸಲು ಉಗುರುಗಳಿಗೆ ನೇಲ್ ಪಾಲೀಶ್ ಹಚ್ಚಬಹುದು. ನಿಮ್ಮ ತ್ವಚೆಗೆ ಹೊಂದುವ ಬಣ್ಣ ಆರಿಸಿಕೊಂಡು ತೆಳುವಾದ ಎರಡು ಕೋಟ್ ಗಳಲ್ಲಿ ನೇಲ್ ಪಾಲಿಶ್ ಹಚ್ಚಿಕೊಳ್ಳಿ. ಇದು ನಿಮ್ಮ ಕಾಲುಗಳನ್ನು ಮತ್ತಷ್ಟು ಅಂದವಾಗಿಸುತ್ತದೆ. ಇತ್ತೀಚೆಗಂತೂ ಉಗುರುಗಳನ್ನು ಸಿಂಗರಿಸಿಕೊಳ್ಳಲು ಹಲವಾರು ಆಕರ್ಷಕ ವಸ್ತುಗಳು ಮಾರುಕಟ್ಟೆಗಳಲ್ಲಿ ದೊರೆಯುತ್ತವೆ.
*ಕಾವ್ಯಶ್ರೀ