ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಒಟ್ಟು 153 ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 33 ಸೇತುವೆಗಳು ಪೂರ್ಣಗೊಂಡಿವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ದೊಮ್ಮಲೂರು ಒಳವರ್ತುಲ ರಸ್ತೆ, ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ಹಾಗೂ ಕಸ್ತೂರ ಬಾ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿದ ಮೂರು ಪಾದಚಾರಿ ಮೇಲುಸೇತುವೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಎಂಟು ಮುಗಿಯುವ ಹಂತದಲ್ಲಿದ್ದು, 49 ಪ್ರಾರಂಭದ ಹಂತದಲ್ಲಿವೆ. 36 ಕಾಮಗಾರಿಗಳಿಗೆ ಅನುಮೋದನೆ ಪಡೆಯಬೇಕಾಗಿದ್ದು, 27 ಸೇತುವೆಗಳ ನಿರ್ಮಾಣಕ್ಕೆ ಮರು ಟೆಂಡರ್ ಕರೆಯಲಾಗುವುದು ಎಂದರು. ಶಾಸಕ ಎನ್.ಎ.ಹ್ಯಾರಿಸ್, ಮೇಯರ್ ಸಂಪತ್‌ರಾಜ್, ಪಾಲಿಕೆ ಸದಸ್ಯ ಸಿ.ಆರ್.ಲಕ್ಷ್ಮೀನಾರಾಯಣ ಇತರರು ಇದ್ದರು.
ದೊಮ್ಮಲೂರು ಒಳವರ್ತುಲ ರಸ್ತೆಯಲ್ಲಿ…: ದೊಮ್ಮಲೂರು ಒಳವರ್ತುಲ ರಸ್ತೆಯಲ್ಲಿ ಎಂಬಸ್ಸಿ ಗಾಲ್ಫ್ ಲಿಂಕ್ ಹತ್ತಿರ ಡೆಲ್ ಕಂಪನಿ ಸಿಗ್ನಲ್ ಬಳಿ ಖಾಸಗಿ ಸಹಭಾಗಿತ್ವದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಮೇಲುಸೇತುವೆ ನಿರ್ಮಿಸಲಾಗಿದೆ. ಮೆ. ಪ್ರಕಾಶ್ ಆರ್ಟ್ಸ್ ಪ್ರೈ.ಲಿ ಸಂಸ್ಥೆಯವರು ನಿರ್ಮಿಸಿದ್ದಾರೆ. ಉದ್ದ 27.20 ಮೀಟರ್, ಅಗಲ 3.50 ಮೀಟರ್ ಹಾಗೂ ಎತ್ತರ 3 ಮೀಟರ್ ಇದೆ. ಒಮ್ಮೆಲೇ 16 ಮಂದಿಯನ್ನು ಹೊತ್ತೂಯ್ಯಬಲ್ಲ ಒಂದು ಹಾಗೂ ಎಂಟು ಮಂದಿಯನ್ನು ಹೊತ್ತೂಯ್ಯಬಲ್ಲ ಒಂದು ಲಿಫ್ಟ್ ಇವೆ.
ಎಚ್‌ಎಎಲ್ ರಸ್ತೆಯಲ್ಲಿ…: ಎಚ್‌ಎಎಲ್ ರಸ್ತೆಯ ದೊಮ್ಮಲೂರು ಶಾಂತಿಸಾಗರ್ ಹೋಟೆಲ್‌ಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಮೆ. ಪಯನೀರ್ ಪಬ್ಲಿಸಿಟಿ ಕಾರ್ಪೋರೇಷನ್ ಲಿ. ಸಂಸ್ಥೆಯವರು 1.35 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಮೇಲುಸೇತುವೆ ನಿರ್ಮಿಸಿದ್ದಾರೆ. ಇದರ ಉದ್ದ 26.20 ಮೀಟರ್, ಅಗಲ 3.60 ಮೀಟರ್ ಹಾಗೂ ಎತ್ತರ 3 ಮೀಟರ್ ಇದೆ. 16 ಮಂದಿಯನ್ನು ಹೊತ್ತೂಯ್ಯಬಲ್ಲ 2 ಲಿಫ್ಟ್ಗಳನ್ನು ಅಳವಡಿಸಲಾಗಿದೆ.
ಕಸ್ತೂರಬಾ ರಸ್ತೆಯಲ್ಲಿ…: ಕಸ್ತೂರಬಾ ರಸ್ತೆಯ ಸರ್ ಎಂ.ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಮೆ. ಕಾರ್ಟೆಲ್ ಔಟ್‌ಡೋರ್ ಅಡ್̆ಟೈಸಿಂಗ್ ಪ್ರೈ. ಲಿ. ಸಂಸ್ಥೆಯವರು ಪಾದಚಾರಿ ಮೇಲುಸೇತುವೆ ನಿರ್ಮಿಸಿದ್ದಾರೆ. ಇದರ ಉದ್ದ 32 ಮೀಟರ್, ಅಗಲ 3 ಮೀಟರ್ ಹಾಗೂ ಎತ್ತರ 3 ಮೀಟರ್ ಇದೆ. 16 ಮಂದಿಯನ್ನು ಹೊತ್ತೂಯ್ಯಬಲ್ಲ 2 ಲಿಫ್ಟ್ಗಳನ್ನು ಅಳವಡಿಸಲಾಗಿದೆ.