ಸುಬ್ರಹ್ಮಣ್ಯ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಜೂ. 7ರಂದು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಸರ್ಪ ಸಂಸ್ಕಾರವಿಚಾರ ದಲ್ಲಿ ಮಠ -ದೇಗುಲ ನಡುವೆ ತಲೆ ದೋರಿರುವ ವಿವಾದ ಪರಿಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಸರ್ಪಸಂಸ್ಕಾರಕ್ಕೆ ಸಂಬಂಧಿಸಿ ಸರಣಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಸಿಬಂದಿ ಕುಮಾರ ಬನ್ನಿಂತಾಯ ಅವರ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಪೇಜಾವರ ಯತಿಗಳು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ಮರುಕಳಿಸದಂತೆ ಮತ್ತು ಎರಡು ಧಾರ್ಮಿಕ ಕೇಂದ್ರಗಳ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಸಲಹೆಗಳನ್ನು ನೀಡುವ ನಿರೀಕ್ಷೆ ಇದೆ.
ದೇವಸ್ಥಾನಮತ್ತು ಮಠದ ನಡುವೆ ಸೌಹಾರ್ದ ವಾತಾವರಣ ಮೂಡಿಸಲು ಪೇಜಾವರ ಶ್ರೀಗಳು ಮಧ್ಯಪ್ರವೇಶಿಸಬೇಕು ಎನ್ನುವ ಅಭಿಪ್ರಾಯಗಳನ್ನು ಹಿಂದೂ ಸಂಘಟನೆಗಳ ಸಹಿತ ಕ್ಷೇತ್ರದ ಮಠ-ಮಂದಿರದ ಭಕ್ತರು ಈ ಹಿಂದೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಜೂ. 7ರ ಕುಕ್ಕೆ ಕ್ಷೇತ್ರ ಬೇಟಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಅವರ ಭೇಟಿಯನ್ನು ಸುಬ್ರಹ್ಮಣ್ಯ ಮಠ ಖಚಿತಪಡಿಸಿದ್ದು, ಉದ್ದೇಶವೇನೆಂದು ಮಾತ್ರ ತಿಳಿಸಿಲ್ಲ.
ಈ ಹಿಂದೆ ಮಡೆಮಡೆಸ್ನಾನ ವಿಚಾರದಲ್ಲಿ ಗೊಂದಲ ಏರ್ಪಟ್ಟಾಗ ಶ್ರೀಗಳು ಮಧ್ಯಪ್ರವೇಶಿಸಿ ಯಶಸ್ವಿ ಪರಿಹಾರ ರೂಪಿಸಿದ್ದರು.