Advertisement

ವ್ಯಾಪ‌ಕ ಭದ್ರತೆ; ಕರಾವಳಿಯಲ್ಲಿ ಶಾಂತ ಮತದಾನ

10:36 AM Apr 19, 2019 | keerthan |

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಬಿರುಸಿನ ಮತ್ತು ಶಾಂತಿಯುತ ಮತದಾನವಾಗಿದ್ದು, ಒಟ್ಟು ಶೇ.77.78ರಷ್ಟು ಪ್ರಮಾಣದ ಮತದಾನವಾಗಿದೆ. 2014ಕ್ಕೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ತುಸು ಹೆಚ್ಚಳವಾಗಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ.

Advertisement

2014ರ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.77.19 ಮತದಾನ ವಾಗಿದ್ದು, ಅದು ರಾಜ್ಯದಲ್ಲೇ ಅತಿಹೆಚ್ಚು ಎಂಬ ಹೆಗ್ಗಳಿಕೆ ಪಡೆದಿತ್ತು. ಅಷ್ಟೇ ಅಲ್ಲ, 1952ರಿಂದ ಜಿಲ್ಲೆಯಲ್ಲಿ ಆಗಿದ್ದ ಅತ್ಯಧಿಕ ಶೇಕಡಾವಾರು ಪ್ರಮಾಣವಾಗಿತ್ತು. ಈ ಬಾರಿ 2014ರ ದಾಖಲೆಯನ್ನು ಮುರಿದಿರುವುದು ಗಮನಾರ್ಹ.

ಗುರುವಾರ ಬೆಳಗ್ಗೆ 6 ಗಂಟೆಗೆ ಜಿಲ್ಲೆಯ ಎಲ್ಲ 1,861 ಬೂತ್‌ಗಳಲ್ಲಿ ಅಭ್ಯರ್ಥಿಗಳ ಬೂತ್‌ ಎಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ಪರಿಶೀಲಿಸಲಾಯಿತು. 7 ಗಂಟೆಗೆ ಮತದಾನಕ್ಕೆ ಅನುವು ಮಾಡಿ ಕೊಡಲಾಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದ ವೇಳೆಯಿಂದಲೂ ಮತದಾರರು ಬಹಳ ಉತ್ಸುಕತೆಯಿಂದ ಸರದಿಯಲ್ಲಿ ನಿಂತಿದ್ದ ದೃಶ್ಯ ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಕಂಡುಬಂತು.

ಶಾಂತಿಯುತ ಮತದಾನ
ಮತದಾನಕ್ಕೆ ಸಂಜೆ 6 ಗಂಟೆಗೆ ಗಡುವು ನೀಡಲಾಗಿತ್ತು. ಆ ಬಳಿಕ ಸರದಿಯಲ್ಲಿದ್ದ ಮತದಾರರಿಗೆ ಚೀಟಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕೆಲವು ಕಡೆ 7 ಗಂಟೆಯ ವರೆಗೆ ಮುಂದುವರಿಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಮತದಾನ ಜರಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿತ್ತು.
ಕ್ಷೇತ್ರದಲ್ಲಿ ಒಟ್ಟು 16 ಕಂಟ್ರೋಲ್‌ ಯೂನಿಟ್‌, 16 ಬ್ಯಾಲೆಟ್‌ ಯೂನಿಟ್‌ ಮತ್ತು 38 ವಿವಿಪ್ಯಾಟ್‌ಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ಬದ ಲಾಯಿಸಲಾಯಿತು. ಎ.18ರಂದು ಜಿಲ್ಲೆಯಲ್ಲಿ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಸಮಾರಂಭ ಇದ್ದವು. ಮದುವೆಯ ನಡುವೆಯೂ ವಧೂವರರು ಮಂಟಪಕ್ಕೆ ತೆರಳುವ ಮುನ್ನ ಅಥವಾ ವಿವಾಹದ ಬಳಿಕ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿ ಬದ್ಧತೆ ಮೆರೆದ ಘಟನೆಗಳು ನಡೆದಿವೆ.

ಮಂಗಳೂರಿನ ಚಿಲಿಂಬಿಯ 100 ವರ್ಷದ ಕೇಶವ ಕುಡ್ವಾ ಅವರು ಲೇಡಿಹಿಲ್‌ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಂಟ್ವಾಳ ತಾಲೂಕಿನ ಪೇರಾಜೆಯ 106 ವರ್ಷದ ಲಕ್ಷ್ಮೀ ಅವರು ಪೇರಾಜೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

Advertisement

ಕಳೆದ ಬಾರಿಗಿಂತ ಶೇ. 0.06 ಅಧಿಕ
2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸುಮಾರು ಶೇ. 0.6 ರಷ್ಟು ಹೆಚ್ಚು ಮತದಾನವಾಗಿದೆ. ಪೂರ್ಣ ಅಂಕಿಅಂಶಗಳು ಲಭ್ಯತೆಗೆ ಬಾಕಿ ಇದ್ದು ಇದರಲ್ಲಿ ತುಸು ಹೆಚ್ಚಳವಾಗುವ ಸಾಧ್ಯತೆಗಳಿವೆ. 2014 ರಲ್ಲಿ ಶೇ.77.19 ಮತದಾನವಾಗಿತ್ತು. 2018ರ ವಿಧಾನಸಭಾ ಚುನಾವಣೆ ಹೋಲಿಸಿದರೆ ಈ ಬಾರಿ ಶೇ 0.38ರಷ್ಟು ಕಡಿಮೆಯಾಗಿದೆ. 2018 ರಲ್ಲಿ ಶೇ. 77.63 ಮತದಾನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next